ಧಾರವಾಡ: ಜಿಲ್ಲೆಯಲ್ಲಿ ಕಳೆದ ಸಾಲಿನ ಕೋವಿಡ್ ಅಲೆಗಿಂತ ಪ್ರಸ್ತುತದಲ್ಲಿ ಸೋಂಕು ಹೆಚ್ಚು ಉಲ್ಬಣವಾಗಿದ್ದು, ನಿತ್ಯ 40 ಟನ್ ಆಕ್ಸಿಜನ್ ಬಳಕೆಯಾಗುತ್ತಿದ್ದು, ಆಕ್ಸಿಜನ್ ಸೇರಿದಂತೆ ಜಿಲ್ಲೆಯಲ್ಲಿ ಬೆಡ್, ವೆಂಟಿಲೇಟರ್, ಐಸಿಯು ಬೆಡ್‍ಗಳ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಇಂದು ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್‍ನ್ನು ಬಳ್ಳಾರಿಯಿಂದ ಪಡೆಯಲಾಗುತ್ತದೆ. ಜಿಲ್ಲೆಯಲ್ಲಿಯೂ ಆಕ್ಸಿಜನ್ ರೀಫಿಲ್ಲಿಂಗ್ ಘಟಕಗಳಿವೆ. ಅವುಗಳಿಂದ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಆಗುತ್ತದೆ.
ಧಾರವಾಡ ಜಿಲ್ಲೆಗೆ ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ 20 ಟನ್ ಆಕ್ಸಿಜನ್ ಪ್ರತಿದಿನ ಬಳಕೆಯಾಗುತ್ತಿತ್ತು. ಆದರೆ, ಸೋಂಕು ಹೆಚ್ಚಾಗಿರುವುದರಿಂದ ಈ ಸಲ 40 ಟನ್ ಆಕ್ಸಿಜನ್ ಪ್ರತಿದಿನ ಬಳಕೆಯಾಗುತ್ತಿದೆ. ಇಲ್ಲಿಯವರೆಗೆ ಜಿಲ್ಲೆಗೆ ಆಕ್ಸಿಜನ್ ಕೊರತೆ ಆಗಿಲ್ಲ. ಪ್ರಕರಣಗಳ ಹೆಚ್ಚಳವಾದರೂ ಆಕ್ಸಿಜನ್ ಕೊರತೆಯಾಗದಂತೆ ಸಮನ್ವಯ ಸಾಧಿಸಿ ಅಗತ್ಯ ಇರುವಷ್ಟು ಆಕ್ಸಿಜನ್ ಪಡೆಯಲು ಜಿಲ್ಲಾಡಳಿತದಿಂದ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ 757 ಬೆಡ್‍ಗಳು ಖಾಲಿ ಇವೆ
ಜಿಲ್ಲೆಯಲ್ಲಿ ಇಂದಿಗೆ (ಮೇ.3) 1,753 ಜನ ಕೋವಿಡ್ ಸೋಂಕಿತರು ಕಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಸುಮಾರು 742 ಜನ ಕಿಮ್ಸ್ ಆಸ್ಪತ್ರೆ ಒಂದರಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಜಿಲ್ಲೆಯಲ್ಲಿ 32 ವೆಂಟಿಲೇಟರ್ ಹಾಗೂ 757 ಬೆಡ್‍ಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಈಗ 371 ಜನ ಕೋವಿಡ್ ಸೋಂಕಿತರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 180 ವೆಂಟಿಲೇಟರ್ಗಳಿವೆ, ಅವುಗಳಲ್ಲಿ 148 ಬಳಕೆಯಾಗಿದ್ದು, 32 ಬಳಕೆಗೆ ಲಭ್ಯವಿವೆ. ರೆಮ್ಡೆಸಿವಿರ್ ಔಷಧ ನಿರಂತರವಾಗಿ ಜಿಲ್ಲೆಗೆ ಬರುತ್ತಿದ್ದು, ಬಂದ ತಕ್ಷಣ ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಕೋವಿಶೀಲ್ಡ್ ಲಸಿಕೆಯನ್ನು ಸರ್ಕಾರ ಆದ್ಯತೆ ಮೇಲೆ ಜಿಲ್ಲೆಗೆ ಪೂರೈಸುತ್ತಿದ್ದು, ಮುಂದಿನ ಕಂತಾಗಿ ಲಸಿಕೆಯು ಬುಧವಾರ ಬರುತ್ತದೆ.
ಈಗಾಗಲೇ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿರುವವರು ಆರು ವಾರದಿಂದ ಎಂಟು ವಾರದೊಳಗೆ ಲಸಿಕೆ ಪಡೆಯಬಹುದು. ಲಸಿಕೆ ಪಡೆಯಲು ದಿನಗಳ ವ್ಯತ್ಯಾಸ ಅಥವಾ ಸ್ವಲ್ಪಮಟ್ಟಿನ ವಿಳಂಬವಾದರೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಸಕಾಲಕ್ಕೆ ಲಸಿಕೆಯನ್ನು ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯು ಶೇ.85 ರಷ್ಟು ಹುಬ್ಬಳ್ಳಿ - ಧಾರವಾಡ ಅವಳಿ ನಗರಕ್ಕೆ ವ್ಯಾಪಿಸಿದ್ದು, ಶೇ.15 ರಷ್ಟು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ. ಪ್ರತಿದಿನ ಸುಮಾರು 4,000ದಷ್ಟು ಜನರ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ಪಾಸಿಟಿವ್ ಆಗಿರುವ ವರದಿಯನ್ನು 24 ರಿಂದ 36 ಗಂಟೆಯಲ್ಲಿ ನೀಡಲಾಗುತ್ತಿದೆ.
ಸೋಂಕು ನೆಗೆಟಿವ್ ಬಂದವರ ವರದಿ ಸ್ವಲ್ಪಮಟ್ಟಿಗೆ ವಿಳಂಬವಾಗುತ್ತಿದೆ. ಜಿಲ್ಲೆಯ ಕೋವಿಡ್ ಪ್ರಯೋಗಾಲಯಗಳಿಗೆ ಇತರ ಜಿಲ್ಲೆಗಳಿಂದಲೂ ಸ್ವ್ಯಾಬ್ ಪರೀಕ್ಷೆಗೆ ಸ್ಯಾಂಪಲ್‍ಗಳನ್ನು ಕಳುಹಿಸುತ್ತಿರುವುದರಿಂದ ಹೆಚ್ಚಿನ ಒತ್ತಡ ಉಂಟಾಗಿದೆ. ಆದರೂ ಹೆಚ್ಚಿನ ಮಾನವ ಸಂಪನ್ಮೂಲ, ಸಿಬ್ಬಂದಿಗಳನ್ನು ಬಳಸಿ ಕಾಲಮಿತಿಯಲ್ಲಿ ವರದಿಗಳನ್ನು ನೀಡಲು ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.