ಬೆಂಗಳೂರು : ಬೆಡ್ ಬ್ಲಾಕ್ ದಂಧೆ ಸಂಬಂಧ ಸಂಸದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರ ವಿರುದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ.
ನಗರದ ನೃಪತುಂಗ ರಸ್ತೆಯಲ್ಲಿರುವ ಡಿಜಿ ಮತ್ತು ಐಜಿ ಕಚೇರಿಗೆ ದೂರು ನೀಡಿದ ಬಳಿಕ ಕಾಂಗ್ರೆಸ್ ಮುಖಂಡ ಮನೋಹರ್ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ವಾರ್ ರೂಂ ನಲ್ಲಿ ಕೋಮು ಭಾವನೆ ಕೆರಳುವಂತೆ ಹೇಳಿಕೆ ನೀಡಿದ್ದ ಶಾಸಕರ ವಿರುದ್ದ ಕ್ರಮ ಕೈಗೊಳ್ಳಬೇಕು.
ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ಹೆಸರುಗಳನ್ನ ಮಾತ್ರ ಉಲ್ಲೇಖಿಸಿ ಕೆಲಸದಿಂದ ತೆಗೆದಿದ್ದಾರೆ. ಅಲ್ಲದೆ, ಮದರಸಾ ಮಾಡಲು ಹೊರಟಿದ್ದೀರಾ ಎಂದು ಹೇಳುವ ಮೂಲಕ ಕೋಮು ಭಾವನೆಗಳನ್ನ ಕೆರಳಿಸಿದ್ದಾರೆ.
ಖಾಸಗಿ ಏಜೆನ್ಸಿಯಿಂದ ಎಲ್ಲಾ ಸಮುದಾಯದವರು ಬಿಬಿಎಂಪಿ ಕೊರೊನಾ ವಾರ್ ರೂಂಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ವಿಚಾರಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕೆ ವಿನಃ ಕೋಮು ಭಾವನಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದರು.
ಐಎಎಸ್ ಅಧಿಕಾರಿ ಮೇಲಿನ ಹಲ್ಲೆ ಕುರಿತು ಪೊಲೀಸರು ಕ್ರಮ ಕೈಗೊಂಡಿಲ್ಲ : ಇಂದು ಬೊಮ್ಮನಹಳ್ಳಿ ವಾರ್ ರೂಂ ಬಳಿ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರಿಂದ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಆರೋಪ ಪ್ರಕರಣ ಈ ಘಟನೆ ಸಂಬಂಧ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯ ಪೊಲೀಸರ ಮೇಲೆ ಇನ್ನೂ ನಂಬಿಕೆ ಇದೆ. ಅಲ್ಲದೆ ಬೆಡ್ ದಂಧೆಯಲ್ಲಿ ಅಕ್ರಮ ನಡೆಸಿರುವ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.