ಹೊಸಪೇಟೆ : ತಾಲೂಕಿನಲ್ಲಿ ಕೊರೊನಾ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ತಾಲೂಕು ಆಡಳಿತ ಹೊಸ ಯೋಜನೆ ರೂಪಿಸಿದೆ. ಮನೆ-ಮನೆ ಸಮೀಕ್ಷೆಯೇ ನಡೆಸಿ ಕೊರೊನಾಗೆ ಜಿಲ್ಲಾಡಳಿತ ತಡೆಯೊಡ್ಡಲು ಮುಂದಾಗಿದೆ.
ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿರುವುದು ತಾಲೂಕು ಆಡಳಿತ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಆರಂಭದಲ್ಲಿಯೇ ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಪತ್ತೆಹಚ್ಚುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗಿದೆ.
ಐಎಲ್‍ಐ ಮತ್ತು ತೀವ್ರ ಉಸಿರಾಟ(ಸಾರಿ) ನಾನಾ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಹಾಗೂ ಕೊರೊನಾ ಪ್ರಸರಣ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ.
ಕೋವಿಡ್ ತಂಡ ರಚನೆ : ಈಗಾಗಲೇ ತಂಡಗಳನ್ನು ರಚನೆ ಮಾಡಿ ಕಾರ್ಯ ಪ್ರವೃತ್ತವಾಗಿದ್ದು, ಪ್ರತಿ ತಂಡದಲ್ಲಿ ನೋಡಲ್ ಅಧಿಕಾರಿ, ವೈದ್ಯರು, ನರ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಮತ್ತು ಸೊಂಕು ತೀವ್ರತರದಲ್ಲಿ ಉಲ್ಭಣಿಸಿದಾಗ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣಗಳು ಸಂಭವಿಸುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ.
ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಮನೆ- ಮನೆ ಸಮೀಕ್ಷೆಯೇ ಮದ್ದು ಎಂದು ನಿರ್ಧರಿಸಿರುವ ಅಧಿಕಾರಿಗಳು, ಸಮೀಕ್ಷೆ ಆರಂಭಿಸಿದ್ದಾರೆ. ಪ್ರತಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರೋ ಈ ತಂಡಗಳು ಮನೆಯಲ್ಲಿರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದೆ.
ಯಾರಾದರೂ ಸೋಂಕಿತರು ಎಂದು ಕಂಡು ಬಂದಲ್ಲಿ ಅವರ ರೋಗಲಕ್ಷಣಗಳ ಆಧಾರದ ಮೇರೆಗೆ ಹೋಂ ಐಸೋಲೇಷನ್ ಅಥವಾ ಆಸ್ಪತ್ರೆಗೆ ದಾಖಲಿಸಬೇಕೆ ಎಂಬುದನ್ನು ಶಿಫಾರಸು ಮಾಡಲಾಗುತ್ತಿದೆ.
ಹೋಂ ಐಸೋಲೇಷನ್ ಇದ್ದಲ್ಲಿ ಪ್ರತಿನಿತ್ಯ ನಿಗಾವಹಿಸಲು ಆರ್ಆರ್ಟಿ ತಂಡಗಳಿಗೆ ತಿಳಿಸುವುದರ ಜತೆಗೆ ಸೊಂಕಿತರಿಗೆ ಔಷಧ ಕಿಟ್‍ಗಳನ್ನು ವಿತರಿಸಲಾಗುತ್ತದೆ.
ಐಎಲ್‍ಐ ಮತ್ತು ತೀವ್ರ ಉಸಿರಾಟ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಪ್ರಕರಣಗಳಿವೆ. ಹಚ್ಚಿ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಅವರಲ್ಲಿ ಪಾಸಿಟಿವ್ ಕಂಡು ಬಂದಲ್ಲಿ ರೋಗಲಕ್ಷಣಗಳ ಆಧಾರದ ಮೇಲೆ ಹೋಂ ಐಸೋಲೇಷನ್ ಅಥವಾ ಆಸ್ಪತ್ರೆಗೆ ದಾಖಲಿಸಬೇಕೆ ಎಂಬುದನ್ನು ಶಿಫಾರಸು ಮಾಡಲಾಗುತ್ತದೆ.
ತಪಾಸಣೆ ನಡೆಸುವುದರ ಜೊತೆಗೆ ಆ ಮನೆಯಲ್ಲಿ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದರೇ ಅವರ ವಿವರವನ್ನು ಪಡೆದುಕೊಂಡು, ಎರಡು ಬಾರಿ ಲಸಿಕೆ ಪಡೆದಿದ್ದರೇ ಸಮಸ್ಯೆ ಇಲ್ಲ, ಒಂದು ಬಾರಿ ಲಸಿಕೆ ಪಡೆದು ಎರಡನೇ ಡೋಸ್‍ಗಾಗಿ ಕಾಯುತ್ತಿರುವವರನ್ನು ಆದ್ಯತೆ ಮೇರೆಗೆ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಲು ಕ್ರಮವಹಿಸಲಾಗುತ್ತದೆ.
ಸದ್ಯ ಹೊಸಪೇಟೆಯಲ್ಲಿ 1894 ಸಕ್ರಿಯೆ ಪ್ರಕರಣಗಳಿವೆ. ಮೇ. 06. ರಂದು ಒಂದೇ ದಿನ 181 ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೇ, 114 ಜನ ಕೊರೊನಾ ಗುಣಮುಖರಾಗಿ, ಬಿಡುಗಡೆ ಹೊಂದಿದ್ದಾರೆ.