ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆನೆಗಳನ್ನು ಸಿಂಗರಿಸಿ, ಪೂಜಾ ಕಾರ್ಯ ನೆರವೇರಿಸಿ, ಗಜಪಡೆಗೆ ವಿಶೇಷ ತಿನಿಸುಗಳಾದ ಹಣ್ಣು-ಹಂಪಲು, ಕಬ್ಬು, ತರಕಾರಿಗಳನ್ನು ನೀಡಲಾಯಿತು. ವಿಶ್ವ ಆನೆಗಳ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವೃತ್ತದ ವತಿಯಿಂದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಕ್ರೆಬೈಲಿನ ಮೊರಾರ್ಜಿ ಶಾಲೆಯಿಂದ ಆನೆ ಬಿಡಾರದವರೆಗೆ ಶಾಲಾ ವಿದ್ಯಾರ್ಥಿಗಳು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದಿಂದ ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು. ನಂತರ ಸಾಗರ ಆನೆಗೆ ಸಾಂಕೇತಿಕ ಪೂಜಾ ಕಾರ್ಯ ನಡೆಸುವ ಮೂಲಕ ಬಿಡಾರದಲ್ಲಿ ಆನೆ ದಿನಾಚರಣೆಗೆ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ವನ್ಯಜೀವಿ ವಿಭಾಗದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್, "ಇಂದು ಆನೆಗಳ ದಿನಾಚರಣೆಯನ್ನು ಆನೆಗಳ ಆವಾಸ ಸ್ಥಾನ ಹಾಗೂ ಸಂರಕ್ಷಣೆ ಮಾಡುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ಶಿವಮೊಗ್ಗದ ವನ್ಯಜೀವಿ ವಿಭಾಗದಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆನೆಗಳ ದಿನಾಚರಣೆಗೆ ಚಾಲನೆ ನೀಡಲಾಗಿದೆ. ಆನೆಗಳಿಗೆ ಪೂಜೆ ಸಲ್ಲಿಸುವ ಜೊತೆಗೆ ವಿಶೇಷ ಆಹಾರವನ್ನು ನೀಡಲಾಯಿತು. ಆನೆ ದಿನಾಚರಣೆ ಅಂಗವಾಗಿ ಮೂರಾರ್ಜಿ ವಸತಿ ಶಾಲೆಯ ಮಕ್ಕಳಿಂದ ಜಾಥವನ್ನು ನಡೆಸಲಾಯಿತು" ಎಂದರು.
"ಜೊತೆಗೆ, ಆನೆಗಳ ಸಂರಕ್ಷಣೆಯ ಕುರಿತು ವೆಬಿನಾರ್ ಆಯೋಜಿಸಲಾಗಿತ್ತು. ಏಷ್ಯಾಟಿಕ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್ನವರಿಂದ ವೆಬಿನಾರ್ ನಡೆಸಲಾಯಿತು. ನಂತರ ಆನೆ ಬಿಡಾರದ ಅಧಿಕಾರಿಗಳಿಗೆ ಆನೆಗಳನ್ನು ಹಿಡಿಯುವುದು ಹಾಗೂ ಮಾವುತರು ಆನೆಗಳಿಗೆ ತರಬೇತಿ ನೀಡುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಿದರು. ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು 20 ಆನೆಗಳಿವೆ. ಈ ಬಿಡಾರದಲ್ಲಿ ಆನೆಗಳ ಮಹತ್ವ ಹಾಗೂ ಆನೆಗಳ ಮಾನವನ ಸಂಬಂಧದ ಕುರಿತು ಮಾಹಿತಿಯನ್ನು ಒದಗಿಸುವ ಜೊತೆಗೆ ಕಾಡು ಪ್ರಾಣಿಗಳಿಂದ ಸಮಸ್ಯೆ ಎದುರಾದರೆ ಅವುಗಳನ್ನು ಹಿಡಿಯಲು ಸಹ ಆನೆಗಳನ್ನು ಬಳಸಲಾಗುತ್ತದೆ" ಎಂದು ತಿಳಿಸಿದರು.
ಬಳಿಕ ಬೆಂಗಳೂರಿನಿಂದ ಬಂದ ಪ್ರವಾಸಿಗರಾದ ಭಾರ್ಗವಿ ಎಂಬುವರು ಮಾತನಾಡಿ, "ನಾವು ಇಲ್ಲಿಗೆ ಮೊದಲನೇ ಸಲ ಬಂದಿದ್ದು. ಇಲ್ಲಿ ಆನೆಗಳನ್ನು ನೋಡಿ ನಮಗೆ ಖುಷಿಯಾಗಿದೆ. ಆನೆಗಳಿಗೆಲ್ಲಾ ಸಿಂಗಾರ ಮಾಡಿದ್ದು ತುಂಬಾ ಚೆನ್ನಾಗಿದೆ. ಅಲ್ಲದೇ, ನಮಗೆ ಇಲ್ಲಿಗೆ ಬಂದ ಮೇಲೆ ಇಂದು ಆನೆಗಳ ದಿನಾಚರಣೆ ಎಂಬುದು ತಿಳಿಯಿತು" ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಹೈದರಾಬಾದ್ನಿಂದ ಬಂದಿದ್ದ ಯಾಶಿ ಎಂಬವರು ಮಾತನಾಡಿ, "ನಾನು ಈ ಭಾಗಕ್ಕೆ ಪ್ರವಾಸಕ್ಕೆಂದು ಬಂದಿದ್ದೆ. ಇಂದು ಇಲ್ಲಿ ಆನೆಗಳ ದಿನಾಚರಣೆ ನಡೆಯುತ್ತಿರುವುದು ತಿಳಿದುಬಂತು. ಹಾಗಾಗಿ ಇಲ್ಲಿಗೆ ಭೇಟಿ ನೀಡಿದೆ. ಇಲ್ಲಿ ಇಷ್ಟೊಂದು ಆನೆಗಳಿಗೆ ಸಿಂಗಾರ ಮಾಡಿದ್ದು ನೋಡಿ ನನಗೆ ಸಂತೋಷವಾಯಿತು. ಇಷ್ಟೊಂದು ಜನ ಕೂಡ ಬಂದಿದ್ದನ್ನು ನೋಡಿ ಖುಷಿಯಾಯಿತು" ಎಂದು ಹೇಳಿದ್ರು.
ಈ ವೇಳೆ ವೈದ್ಯಾಧಿಕಾರಿಗಳಾದ ಡಾ. ವಿನಯ್, ಡಾ. ಮುರಳಿ ಮನೋಹರ್ ಮತ್ತು ಡಾ. ಕಲ್ಲಪ್ಪ, ಗಾಜನೂರು ಗ್ರಾ.ಪಂ ಅಧ್ಯಕ್ಷರಾದ ನಾಗರಾಜ್, ಕಾರ್ಗಲ್ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ. ಸುರೇಶ್, ಮೊರಾರ್ಜಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ದಳವಾಯಿ, ತುಂಗ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರ, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಜೀವ್ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಇದನ್ನೂ ಓದಿ: World Elephant Day: ಆನೆಗಳು ಗ್ರಾಮಗಳಿಗೆ ಪ್ರವೇಶಿಸಿದಂತೆ ತಡೆಯಲು ಇದೆ ಪರಿಹಾರ: ಈ ನಿಟ್ಟಿನಲ್ಲಿ ಸಾಗಬೇಕಿದೆ ಅರಣ್ಯ ಇಲಾಖೆ