ಶಿವಮೊಗ್ಗ : ಮಾರ್ಚ್ 23ರ ನಂತರ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಘೋಷಿಸಿದ ಲಾಕ್‍ಡೌನ್ ಅವಧಿಯಲ್ಲಿ ಜಿಲ್ಲೆಯ ಸಾಂತ್ವನ ಕೇಂದ್ರಗಳಲ್ಲಿ ದಾಖಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣ ಅತ್ಯಂತ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಪಂ ಸಿಇಒ ಎಂ ಎಲ್ ವೈಶಾಲಿ ಹೇಳಿದರು.
ಜಿಪಂ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಅವಧಿಯಲ್ಲಿ ಕೌಟುಂಬಿಕ ವ್ಯವಸ್ಥೆ ಸಾಮರಸ್ಯದಿಂದ ಕೂಡಿರಬೇಕಾಗಿತ್ತು. ಬದಲಾಗಿ ಒಟ್ಟು ಕುಟುಂಬದ ವಾತಾವರಣ ಕಲುಷಿತವಾಗುತ್ತಿರುವುದು ಬೇಸರವೆನಿಸಿದೆ. ಅರ್ಥಿಕ ಸಂಕಷ್ಟ ಹಾಗೂ ಮದ್ಯವ್ಯಸನ ಮುಂತಾದ ಸಮಸ್ಯೆಗಳನ್ನು ದಾಖಲಾದ ದೂರುಗಳಲ್ಲಿ ಪ್ರಮುಖವಾಗಿ ಗುರುತಿಸಲಾಗಿದೆ ಎಂದರು.
ಸಾಂತ್ವನ ಕೇಂದ್ರಗಳು 24ಗಂಟೆ ಕಾರ್ಯನಿರ್ವಹಿಸಬೇಕು. ಕೆಲ ಕೇಂದ್ರಗಳು ನಿಯಮಾನುಸಾರ ಕಾರ್ಯನಿರ್ವಹಿಸದಿರುವ ಬಗ್ಗೆ ದೂರು ಬರುತ್ತಿವೆ. ಮುಂದಿನ ದಿನಗಳಲ್ಲಿ ಸಾಂತ್ವನ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಕಾರ್ಯ ಪರಿಶೀಲಿಸಲಾಗುವುದು ಎಂದರು.
ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ ಹಾಗೂ ಇನ್ನಿತರ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿರುವ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ರಕ್ಷಣೆ ನೀಡುವುದರ ಜೊತೆಗೆ ಸ್ವಪ್ರೇರಣೆಯಿಂದ ತಮ್ಮ ಕಾಲು ಮೇಲೆ ತಾವು ನಿಲ್ಲಲು ಅನುಕೂಲವಾಗುವಂತೆ ತರಬೇತಿ ನೀಡುವುದರೊಂದಿಗೆ ಇಂತಹ ಸಂತ್ರಸ್ತರಿಗೆ ಸಮಾಜದಲ್ಲಿ ಇತರೆ ಮಹಿಳೆಯರಂತೆ ಧೈರ್ಯವಾಗಿ ಬದುಕುವಂತೆ ಸಶಕ್ತರನ್ನಾಗಿ ಮಾಡುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ 300ಕ್ಕೂ ಹೆಚ್ಚಿನ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿರುವುದು ಕಳವಳಕಾರಿ ಸಂಗತಿ.
ಈ ಕಾಯ್ದೆಯಡಿ ಸಂತ್ರಸ್ತೆಗೆ ಸಕಾಲದಲ್ಲಿ ಕಾನೂನು ಮತ್ತು ಸಾಮಾಜಿಕ ರಕ್ಷಣೆ ಒದಗಿಸಿ, ಕ್ರೌರ್ಯಕ್ಕೆ ಕಾರಣರಾದವರನ್ನು ನಿಯಮಾನುಸಾರ ಕಾನೂನು ಕ್ರಮಕ್ಕೆ ಒಳಪಡಿಸುವಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕ್ರಮವಹಿಸಬೇಕಾದ ತುರ್ತು ಅಗತ್ಯವಿದೆ ಎಂದರು.
ಪೋಕ್ಸೋ ಕಾಯ್ದೆಯಡಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ಮಂದಗತಿಯಲ್ಲಿದೆ. ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅಗತ್ಯ ಕ್ರಮವಹಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪೂಜಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ,ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿ.ಸುರೇಶ್(ಪ್ರಭಾರ) ಇತರರು ಉಪಸ್ಥಿತರಿದ್ದರು.