Wearable Generator: ಆಧುನಿಕ ತಂತ್ರಜ್ಞಾನದ ಮೂಲಕ ಸಂಶೋಧಕರು ಇದೀಗ ಹೊಸ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ. ಇದು ಧರಿಸಬಹುದಾದ ವಸ್ತು. ಇದರ ಸಹಾಯದಿಂದ ನೀವು ವಾಕ್ ಮಾಡುತ್ತಲೇ ವಿದ್ಯುತ್ ಉತ್ಪಾದಿಸಬಹುದು. ಮತ್ತು ಅದನ್ನು ನೀವು ನಿಮ್ಮ ಸಾಧನಗಳ ಚಾರ್ಜಿಂಗ್ಗೆ ಬಳಸಬಹುದಾಗಿದೆ.
ವೈಬ್ರೇಟ್ ಮೂಲಕ ವಿದ್ಯುತ್ ಉತ್ಪಾದಿಸುವ ಹೊಸ ತಂತ್ರಜ್ಞಾನವನ್ನು ವಾಟರ್ಲೂ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದು ಧರಿಸಬಹುದಾದ ಜನರೇಟರ್ (Wearable Generator) ಆಗಿದ್ದು, ದೇಹದ ಚಲನೆಗಳಿಂದ ವಿದ್ಯುತ್ ಉತ್ಪಾದಿಸುತ್ತದೆ. ಹೀಗೆ ಉತ್ಪಾದಿಸಿದ ವಿದ್ಯುತ್ನಿಂದ ನೀವು ಸಣ್ಣಪುಟ್ಟ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು.
ಪಾಲಿಮರ್ ಫಂಕ್ಷನಲೈಸ್ಡ್ ಪೆರೋವ್‌ಸ್ಕೈಟ್ ಪೈಜೊಕಾಂಪೋಸಿಟ್ ವಿತ್ ಲಾರ್ಜ್ ಕರೆಂಟ್ ಡೆನ್ಸಿಟಿ ಔಟ್‌ಪುಟ್, ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಈ ತಿಂಗಳು ಪ್ರಕಟಗೊಂಡ ಬ್ರೇಕಿಂಗ್ ಡೈಲೆಕ್ಟ್ರಿಕ್ ಡಿಲೆಮಾ ಅಧ್ಯಯನದ ಪ್ರಕಾರ, ಹೊಸ ವೇರೆಬಲ್ ಜನರೇಟರ್ ಮಾನವ ದೇಹಕ್ಕೆ ಹೊಂದಿಕೊಳ್ಳುವ, ಶಕ್ತಿ-ಸಾಮರ್ಥ್ಯ ಮತ್ತು ಕೈಗೆಟುಕುವ ದರದ ವಸ್ತುಗಳನ್ನು ಒಳಗೊಂಡಿದೆ.
ವಾಟರ್ಲೂ ವಿಶ್ವವಿದ್ಯಾನಿಲಯವು ಹೊರಡಿಸಿದ ಪತ್ರಿಕಾ ಪ್ರಕಟಣೆಯಂತೆ, ಹೊಸ ವೇರೆಬಲ್ ಜನರೇಟರ್ ಸಹಾಯದಿಂದ ನೀವು ಪಾರ್ಕ್ನಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ವಾಕಿಂಗ್ ಮಾಡುತ್ತಲೇ ವಿದ್ಯುತ್ ಉತ್ಪಾದಿಸಿ, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ವೇರೆಬಲ್ ಜನರೇಟರ್‌ನಿಂದ ದೊಡ್ಡ ಯಂತ್ರಗಳನ್ನೂ ಚಾರ್ಜ್ ಮಾಡಬಹುದು ಎಂದು ಹೇಳಲಾಗುತ್ತದೆ.
ಹಾಗಾದರೆ, ಏನಿದು ವೇರೆಬಲ್ ಜನರೇಟರ್?: ಇದು ಪೀಜೋಎಲೆಕ್ಟ್ರಿಕ್ ಪರಿಣಾಮವನ್ನು ಬಳಸಿಕೊಳ್ಳುತ್ತದೆ. ಸ್ಫಟಿಕಗಳು ಮತ್ತು ಕೆಲವು ಪಿಂಗಾಣಿಗಳಂತಹ ನಿರ್ದಿಷ್ಟ ವಸ್ತುಗಳು ಯಾಂತ್ರಿಕ ಒತ್ತಡಕ್ಕೆ ಒಳಗಾದಾಗ ವಿದ್ಯುತ್ ಉತ್ಪಾದಿಸುವ ವಿದ್ಯಮಾನ. ಈ ಪರಿಣಾಮವು ಯಾಂತ್ರಿಕ ಒತ್ತಡವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ವಸ್ತುಗಳನ್ನು ಅನುಮತಿಸುತ್ತದೆ.
ಯೋಜನೆಯ ಪ್ರಮುಖ ಸಂಶೋಧಕ ಮತ್ತು ವಾಟರ್ಲೂನಲ್ಲಿನ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿರುವ ಡಾ.ಆಸಿಫ್ ಖಾನ್, ಈ ಆವಿಷ್ಕಾರವನ್ನು ಗೇಮ್ ಚೇಂಜರ್ ಎಂದು ಬಣ್ಣಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಸಾಧನವನ್ನು ಆವಿಷ್ಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
ವಾಟರ್‌ಲೂ ಇನ್‌ಸ್ಟಿಟ್ಯೂಟ್ ಫಾರ್ ನ್ಯಾನೊಟೆಕ್ನಾಲಜಿಯ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ.ದಯಾನ್ ಬಾನ್, ಹಳೆಯ ವಸ್ತುಗಳು ಸುಲಭವಾಗಿ, ಸೀಮಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಆದರೆ ಜನರೇಟರ್‌ಗಾಗಿ ಅವರು ರಚಿಸಿದ ಹೊಸ ವಸ್ತುಗಳು ಹೊಂದಿಕೊಳ್ಳುವ, ಹೆಚ್ಚು ಶಕ್ತಿ-ಸಮರ್ಥ ಮತ್ತು ಕಡಿಮೆ ವೆಚ್ಚದಾಯಕವಾಗಿವೆ ಎಂದು ಹೇಳಿದ್ದಾರೆ.
ವಾಟರ್‌ಲೂ ಮತ್ತು ಟೊರೊಂಟೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರನ್ನು ಒಳಗೊಂಡಿರುವ ಸಂಶೋಧನಾ ತಂಡವು ಇದಕ್ಕಾಗಿ ಪೇಟೆಂಟ್ ಸಲ್ಲಿಸಿದೆ. ವಾಯುಯಾನ ಸುರಕ್ಷತಾ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ತಮ್ಮ ಜನರೇಟರ್ ಅನ್ನು ವಾಣಿಜ್ಯೀಕರಿಸಲು ಕೆನಡಾದ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ.
ಇದನ್ನೂ ಓದಿ: ಉದ್ಯೋಗಿಗಳಿಗೆ ಶಾಕ್ ನೀಡಿದ ಓಲಾ - 500 ಕೆಲಸಗಾರರು ವಜಾ!