ಹಾವೇರಿ: ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಇತಿಹಾಸ ಹೊಂದಿರುವ ಬೊಮ್ಮಾಯಿ ಕುಟುಂಬಕ್ಕೆ ಮೊದಲ ಚುನಾವಣೆಯ ಸೋಲಿನ ಪರಂಪರೆಯೂ ಇದೆ. ಈಗ ಶಿಗ್ಗಾಂವಿ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದ್ದ ಭರತ್ ಬೊಮ್ಮಾಯಿ ಕೂಡ ಸೋಲನುಭವಿಸಿದ್ದಾರೆ. ಈ ಮೂಲಕ ಅಜ್ಜ, ಅಪ್ಪನ ಬಳಿಕ ಮೊಮ್ಮಗನಿಗೂ ಸೋಲಿನ ಪರಂಪರೆ ಮುಂದುವರಿದಿದೆ.
ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ, ಅವರ ಪುತ್ರ ಬಸವರಾಜ ಬೊಮ್ಮಾಯಿ ಕೂಡ ಮೊದಲ ಚುನಾವಣೆಯಲ್ಲಿ ಸೋತು ಬಳಿಕ ರಾಜಕಾರಣದಲ್ಲಿ ಯಶಸ್ವಿಯಾಗಿ, ಸಿಎಂ ಹುದ್ದೆಗೇರಿದ್ದರು. ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರಿನ ಭರತ್ ಬೊಮ್ಮಾಯಿ ಕೂಡ ಈಗ ಚುನಾವಣೆಯ ಮೊದಲ ಸ್ಪರ್ಧೆಯಲ್ಲಿ ಸೋಲುಂಡಿದ್ದಾರೆ.
ವಕೀಲರಾಗಿದ್ದ ಎಸ್.ಆರ್.ಬೊಮ್ಮಾಯಿ ಪ್ರಥಮ ಬಾರಿಗೆ 1962ರಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಕೆ.ಕಾಂಬಳೆ ವಿರುದ್ಧ ಸೋಲು ಅನುಭವಿಸಿದ್ದರು. 1967ರಲ್ಲಿ ಆದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಟಿ.ಕೆ.ಕಾಂಬಳೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರದಲ್ಲಿ ಎಸ್.ಆರ್.ಬೊಮ್ಮಾಯಿ ಜನತಾ ಪಕ್ಷದ ಹುರಿಯಾಳಾಗಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ 1978ರಿಂದ 1985 ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದರು. 1988-89ರಲ್ಲಿ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿದ್ದರು.
1994ರ ಚುನಾವಣೆಯಲ್ಲಿ ಎಸ್.ಆರ್.ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕೇತ್ರದಿಂದ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿದ್ದರು. ಅದೇ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್ ವಿರುದ್ಧ ಬಸವರಾಜ ಬೊಮ್ಮಾಯಿ ಸೋಲು ಅನುಭವಿಸಿದ್ದರು. ನಂತರದಲ್ಲಿ ಬಸವರಾಜ ಬೊಮ್ಮಾಯಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2008 ರಿಂದ 2024ರವರೆಗೆ ಸತತ ನಾಲ್ಕು ಬಾರಿ ಗೆದ್ದಿದ್ದರು. 2021ರಿಂದ 2023ವರೆಗೆ ರಾಜ್ಯದಲ್ಲಿ 23ನೇ ಮುಖ್ಯಮಂತ್ರಿಯೂ ಆಗಿದ್ದರು.
ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ತಂದೆ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರೂ ಯಾವುದೇ ಚುನಾವಣೆ ಎದುರಿಸಿರಲಿಲ್ಲ. ಶಿಗ್ಗಾಂವಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಸವರಾಜ ಬೊಮ್ಮಾಯಿ 2024ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಗೆ ಪ್ರಥಮ ಬಾರಿಗೆ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಥಮ ಚುನಾವಣೆಯಲ್ಲಿಯೇ ಕಾಂಗ್ರೆಸ್‌ನ ಯಾಸೀರ್ ಖಾನ್ ಪಠಾಣ್ ವಿರುದ್ಧ 13,448 ಮತಗಳಿಂದ ಸೋಲು ಅನುಭವಿಸಿದ್ದಾರೆ. ಈ ಮೂಲಕ ಬೊಮ್ಮಾಯಿ ಕುಟುಂಬದ ಮೊದಲ ಚುನಾವಣೆ ಸೋಲಿನ ಪರಂಪರೆ ಪುನರಾವರ್ತನೆಯಾದಂತಾಗಿದೆ.
ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಸತತವಾಗಿ ಗೆದ್ದು ಬೀಗಿರುವ ಕ್ಷೇತ್ರ ಶಿಗ್ಗಾಂವಿ. ಬೊಮ್ಮಾಯಿ ಭದ್ರಕೋಟೆ. ಕಾಂಗ್ರೆಸ್ ಗೆಲುವು ಅಸಾಧ್ಯ ಎಂಬ ಲೆಕ್ಕಾಚಾರ ತಲೆಕೆಳಗಾಗಿ ಹೋಗಿದೆ. ವಿಧಾನಸಭೆ ಪ್ರವೇಶ ಮಾಡುವ ಕನಸು ಕಂಡಿದ್ದ ಭರತ್ ಮೊದಲ ಸ್ಪರ್ಧೆಯಲ್ಲಿ ಸೋತಿದ್ದಾರೆ. ಅವರ ಅಜ್ಜ, ತಂದೆ ಕೂಡ ಮೊದಲ ಬಾರಿ ಸೋತಿದ್ದರು. ಬಳಿಕ ನಿರಂತರವಾಗಿ ರಾಜಕೀಯ ಏಳಿಗೆ ಕಂಡವರು. ಎಸ್.ಆರ್.ಬೊಮ್ಮಾಯಿ ಸಿಎಂ, ಕೇಂದ್ರ ಸಚಿವ ಹುದ್ದೆಗೇರಿದವರು. ಬಸವರಾಜ ಬೊಮ್ಮಾಯಿ ಕೂಡಾ ಮುಖ್ಯಮಂತ್ರಿಯಾಗಿ ಬಳಿಕ ಸಂಸದರಾಗಿದ್ದಾರೆ. ಹಾಗೆಯೇ ಭರತ್ ಬೊಮ್ಮಾಯಿ ಅವರಿಗೆ ಇನ್ನೂ ಚಿಕ್ಕ ವಯಸ್ಸು, ರಾಜಕಾರಣದಲ್ಲಿ ಮುಂದೆ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದು ಬಿಜೆಪಿ ಮುಖಂಡರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿದ ಯಾಸೀರ್ ಖಾನ್ ಪಠಾಣ್: ಈ ಅಂಶಗಳೇ ಗೆಲುವಿಗೆ ಕಾರಣ!