ಶಿವಮೊಗ್ಗ: ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲಿಸಿ, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ವತಿಯಿಂದ ನಗರದ ಅಶೋಕ್ ವೃತ್ತದಲ್ಲಿ ಕರವೇ ಕಾರ್ಯಕರ್ತರು ಸೇರಿ, ಶರಾವತಿ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಹಲವೆಡೆ ಈ ಯೋಜನೆ ಖಂಡಿಸಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನಕಾರರು ಕೆಲಕಾಲ ರಸ್ತೆ ತಡೆ ನಡೆಸಿದರು. ಯೋಜನೆ ರೂಪಿಸುತ್ತಿರುವ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ನಿಂದ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ:
ಶರಾವತಿ ಉಳಿಸಿ ಹೋರಾಟ ಸಮಿತಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್ಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ಜಿಲ್ಲಾಧಿಕಾರಿ ಅವರು ಆಯಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸುವ ಕುರಿತು, ಬಿಇಒಗಳು ನಿರ್ಧಾರ ತೆಗೆದು ಕೊಳ್ಳಬಹುದು ಎಂದು ಆದೇಶ ನೀಡಿದ್ದರು. ಅದರಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಬಿಇಒಗಳು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿ:
ಶಿವಮೊಗ್ಗದಲ್ಲಿ ಬಸ್ ಸಂಚಾರ ವಿರಳವಾಗಿದ್ದು, ಆಟೋ ಸಂಚಾರ ಎದಿನಂತೆ ಇದೆ. ಇನ್ನೂ ಸಾಗರ, ಹೊಸನಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭದ್ರಾವತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಆಗಿರುವ ತಾಲೂಕುಗಳಲ್ಲಿ ಬೆಳಗ್ಗೆಯಿಂದಲೇ ಹೋರಾಟಗಾರರು ರಸ್ತೆಗಿಳಿದು ಅಂಗಡಿ ಮುಂಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.