ಶಿವಮೊಗ್ಗ: ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಮ್ಮ ತಂಡ ಅಭೂತಪೂರ್ವವಾಗಿ ಗೆಲುವು ಸಾಧಿಸಿದೆ. ಇದು ಸಂತೋಷದ ಸಂಗತಿ. ಚುನಾವಣೆಯ ನಂತರ ನಾವೆಲ್ಲಾ ಒಂದೇ ಎಂಬ ಮನೋಭಾವ ನಮ್ಮಲ್ಲಿದೆ. ಸರ್ಕಾರಿ ನೌಕರರ ಕ್ಷೇಮಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ನಾವು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದು ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಸಿ.ಎಸ್ ಷಡಕ್ಷರಿ ತಿಳಿಸಿದ್ದಾರೆ.
ಚುನಾವಣೆವರೆಗೂ ಎರಡು ಗುಂಪು ಇದ್ದದ್ದು ನಿಜ, ಆದರೆ ಈಗ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಟ್ಟಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ತಾಲೂಕಿನ ಆರು ಸ್ಥಾನಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 68 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ 60ಕ್ಕೂ ಹೆಚ್ಚು ಸ್ಥಾನಗಳನ್ನು ನಮ್ಮ ತಂಡದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ಸಂತೋಷದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಜುಲೈ 1 ರಿಂದ 11ರವರೆಗೆ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಹೊಸದಾಗಿ ಚುನಾಯಿತರಾದ ಎಲ್ಲಾ ನಿರ್ದೇಶಕರು ತಾವೇ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಎಂದು ಹೇಳುತ್ತಿದ್ದಾರೆ. ಅವರೆಲ್ಲರ ಪ್ರೀತಿಯಿಂದ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಲು ನಾನು ಸಿದ್ಧನಿದ್ದೇನೆ. ಇದರ ಜೊತೆಗೆ ರಾಜ್ಯಾಧ್ಯಕ್ಷರ ಹುದ್ದೆಗೂ ಪ್ರಯತ್ನಿಸುತ್ತಿದ್ದೇನೆ.ಜಿಲ್ಲಾಧ್ಯಕ್ಷ ಮತ್ತು ರಾಜ್ಯ ರಾಜ್ಯಾಧ್ಯಕ್ಷ ಎರಡು ಹುದ್ದೆಗಳನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಯಾವುದೇ ಗೊಂದಲವಿಲ್ಲದೆ ಶಾಂತಿ ರೀತಿಯಿಂದ ಚುನಾವಣೆ ನಡೆದಿದ್ದು. ಚುನಾವಣಾ ಅಧಿಕಾರಿಗಳು ಸೇರಿದಂತೆ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೂ ನಮ್ಮ ಅಭಿನಂದನೆಗಳು ಹಾಗೆಯೇ ನನ್ನ ಮೇಲೆ ಪ್ರೀತಿ, ನಂಬಿಕೆ, ವಿಶ್ವಾಸವಿಟ್ಟ ಎಲ್ಲರಿಗೂ ಪ್ರೀತಿಯ ಕೃತಜ್ಞತೆಗಳು ಎಂದು ತಿಳಿಸಿದರು.