ಶಿವಮೊಗ್ಗ: ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ.15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆಗೆ ಅನುಸಾರವಾಗಿ ಮೇ. 20 ರವರೆಗೆ ಹೆಚ್ಚುವರಿಯಾಗಿ ನೀರು ಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ. ಮಲವಗೊಪ್ಪದ ಕಚೇರಿಯಲ್ಲಿ ನಡೆದ 80ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ನೀರಾ ಸಲಹಾ ಸಮಿತಿ ಮತ್ತು ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಎಲ್ಲಾ ರೈತರ ಹಿತದೃಷಿಯಿಂದ ಭದ್ರಾ ಜಲಾಶಯದ ಬೇಸಿಗೆ ಬೆಳೆಗಳಿಗೆ ಹರಿಸುತ್ತಿದ್ದ ನೀರನ್ನು ಮೇ.15 ಕ್ಕೆ ನಿಲ್ಲಿಸಲಾಗುತ್ತಿದೆ. ನೀರಿನ ಅವಶ್ಯಕತೆಗನುಗುಣವಾಗಿ ಮೇ.20 ರವರೆಗೆ ನೀರನ್ನು ಹರಿಸಲು ಸಮಿತಿ ನಿರ್ಧಾರ ಕೈಗೊಂಡಿದೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು: ಮೇಕೆ ಮರಿ ನುಂಗಿದ ಹೆಬ್ಬಾವು ಸೆರೆ
ಭದ್ರಾ ಜಲಾಶಯದ ನೀರಿನ ಪ್ರಮಾಣ: 27. 04. 2022 ರಂದು ಹಾಲಿ ಬಳಕೆಗೆ ಬರುವ ನೀರಿನ ಪ್ರಮಾಣ 25.894 ಟಿಎಂಸಿ. 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗೆ ಹೆಚ್ಚುವರಿ ದಿನಗಳಿಗೆ ಹರಿಸಲು ಬೇಕಾಗಬಹುದಾದ ಸರಾಸರಿ ನೀರಿನ ಪ್ರಮಾಣ 6.20 ಟಿಂಎಂಸಿ. ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 17.24 ಟಿಂಎಂಸಿ. ಭದ್ರಾ ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 8.65 ಟಿಎಂಸಿ. ಸಭೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ ಅರುಣ್, ಕಬಿನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.