ಶಿವಮೊಗ್ಗ : ಭದ್ರಾವತಿಯ ವಿಶ್ವಶ್ವೇರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್ಎಲ್) ಯನ್ನು ಆಗಸ್ಟ್ 10 ರಿಂದ ಪುನರಾರಂಭವಾಗಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಐಎಸ್ಎಲ್ ಕಾರ್ಖಾನೆಯೇ ಚುನಾವಣಾ ವಿಷಯವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಕಾರ್ಮಿಕರು ಹೋರಾಟ ನಡೆಸುತ್ತಿರುವ ಜಾಗಕ್ಕೆ ಬಂದು ಕಾರ್ಖಾನೆ ಉಳಿಸುವುದಾಗಿ ಭರವಸೆ ನೀಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸ್ಪಷ್ಟ ನಿರ್ದೇಶನದೊಂದಿಗೆ, ಎಸ್ಎಐಎಲ್ ಆಡಳಿತ ಮಂಡಳಿಯು ವಿಐಎಸ್ಎಲ್ ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನಾರಂಭವಾಗಲಿದೆ. ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿಗಳ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಎಸ್ಎಐಎಲ್ ಕೈಗೊಳ್ಳಲು ಸಹಕಾರವಾಗಿದೆ. ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ವಿಐಎಸ್ಎಲ್ ನ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ನೀಡಿದಂತಹ ಭರವಸೆಗಳನ್ನು ಈಡೇರಿಸಿದ ಅವರ ಅಚಲ ಬದ್ಧತೆಗಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಿಐಎಸ್ಎಲ್ ಶೀಘ್ರದಲ್ಲಿಯೇ ಉನ್ನತ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತ ವೈಭವವನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ. ಇಂತಹ ಒಂದು ಮಹತ್ತರವಾದ ತೀರ್ಮಾನ ಬರುವಲ್ಲಿ ತಾಳ್ಮೆಯಿಂದ ಸಹಕರಿಸಿದ ವಿಐಎಸ್ಎಲ್ ನ ಎಲ್ಲಾ ನೌಕರ ಬಾಂಧವರಿಗೆ, ಕಾರ್ಮಿಕ ಸಂಘಟನೆ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ನನ್ನ ಧನ್ಯವಾದಗಳು ಎಂದು ಸಂಸದರು ತಿಳಿಸಿದ್ದಾರೆ.
ಧರಣಿ ಮುಂದುವರೆಯಲಿದೆ ಎಂದ ಕಾರ್ಮಿಕರ ಸಂಘ : ವಿಐಎಸ್ಎಲ್ ಕಾರ್ಖಾನೆಗೆ ಬೀಗ ಹಾಕಬಾರದು. ದುಡಿಯವ ಕೈಗಳಿಗೆ ಕೆಲಸ ಸಿಗಬೇಕು ಎಂದು ಗುತ್ತಿಗೆ ಕಾರ್ಮಿಕರು ಕಾರ್ಖಾನೆಯ ಮುಂಭಾಗ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಖಾನೆಯಲ್ಲಿ 1500 ಸಾವಿರ ಜನ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕಾರ್ಖಾನೆ ಪುನಾರಂಭ ಮಾಡುವುದರಿಂದ 1500 ಗುತ್ತಿಗೆ ಕಾರ್ಮಿಕರು ಹಾಗೂ ಕುಟುಂಬಕ್ಕೆ ಸಹಾಯಕವಾಗಲಿದೆ. ಕಾರ್ಖಾನೆ ಪುನಾರಂಭ ಮಾಡಿದರೂ ಸಹ ಗುತ್ತಿಗೆ ಕಾರ್ಮಿಕ ಸಂಘ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ : ನೌಕರನಿಗೆ ವಯೋ ನಿವೃತ್ತಿ.. ಸರ್ಕಾರಿ ವಾಹನದಲ್ಲೇ ಮನೆಗೆ ಡ್ರಾಪ್ ಮಾಡಿ ಬೀಳ್ಕೊಟ್ಟ ಸಾಗರದ ಉಪವಿಭಾಗಾಧಿಕಾರಿ