ಶಿವಮೊಗ್ಗ: ಶಿವಮೊಗ್ಗದಲ್ಲಿ ಪದೇ ಪದೆ ಗಲಾಟೆಗಳು ನಡೆಯುತ್ತಿದೆ. ಗಲಾಟೆ ನಡೆಯುವ ತಾಯಿ ಬೇರು ಹುಡುಕುವ ಅವಶ್ಯಕತೆ ಇದೆ ಎಂದು ಅವಧೂತರಾದ ವಿನಯ್ ಗುರೂಜಿ ಹೇಳಿದ್ದಾರೆ. ಈ ಬಗ್ಗೆ ರಾಜಕೀಯ ವ್ಯಕ್ತಿಗಳು ಕೂಡ ವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಶಿವಮೊಗ್ಗ ರಾಗಿಗುಡ್ಡ ಗಲಾಟೆಗೆ ಸಂಬಂಧಿಸಿದಂತೆ ನಗರದ ಗಾಂಧಿ ಪಾರ್ಕ್ನಲ್ಲಿ ಸರ್ವ ಧರ್ಮ ಗುರುಗಳ ಸಭೆ ನಡೆಸಲಾಯಿತು. ಈ ವೇಳೆ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ವಿನಯ್ ಗುರೂಜಿ ಸೋಮವಾರ ಮಾತನಾಡಿದರು. ಶಿವಮೊಗ್ಗದಲ್ಲಿ ಘರ್ಷಣೆಗಳು ನಡೆಯುತ್ತಿದೆ. ಈ ಎಲ್ಲ ಗದ್ದಲಗಳಲ್ಲಿ 15 ರಿಂದ 30 ವರ್ಷದ ಯುವಕರಷ್ಟೇ ಕಾಣುತ್ತಿದ್ದಾರೆ. ಇದರಲ್ಲಿ ಯಾರು ಕೂಡ ಶ್ರೀಮಂತರ ಮಕ್ಕಳು ಕಾಣುತ್ತಿಲ್ಲ ಎಂದರು.
ಶಿವಮೊಗ್ಗದಲ್ಲಿ ಯಾವುದೋ ಒಂದು ಗುಂಪು ನಿಂತು ಆಟವಾಡುತ್ತಿದೆ. ಇದನ್ನು ಶಿವಮೊಗ್ಗದ ಜನರು ಅರಿಯಬೇಕಿದೆ. ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ತಿದ್ದುವ ಕೆಲಸವಾಗಬೇಕಿದೆ. ಧರ್ಮಗುರುಗಳು, ಸ್ವಾಮೀಜಿಗಳು ಎಷ್ಟು ಹೇಳಲು ಸಾಧ್ಯ. ಕಾನೂನು ಕಠಿಣಗೊಳಿಸುವ ಅಗತ್ಯವಿದ್ದು, ಮುಲಾಜಿಲ್ಲದೇ, ಕೊರೊನಾ ಬಂದಾಗ ದೂರವಿಟ್ಟ ಹಾಗೆ ಮಕ್ಕಳನ್ನು ಸರಿ ದಾರಿಗೆ ತರಲು ದೂರವಿಟ್ಟು ಸರಿದಾರಿಗೆ ತರಬೇಕಿದೆ ಎಂದು ಹೇಳಿದ್ದಾರೆ. ಯುವಕರು ಹಿರಿಯರು ಹೇಳಿದ್ದನ್ನು ಕೇಳಬೇಕು ಎಂದು ವಿನಯ್ ಗುರೂಜಿ ಸಲಹೆ ನೀಡಿದರು.
ಈ ವೇಳೆ ಬಸವಕೇಂದ್ರದ ಸ್ವಾಮೀಜಿ, ಫಾದರ್ ಪಿಂಟೂ ಸೇರಿದಂತೆ ವಕೀಲ ಶ್ರೀಪಾಲ್, ಕಿರಣ್, ಗುರುಮೂರ್ತಿ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ಪ್ರಚೋದನೆ ನೀಡುವ ಕಟೌಟ್ ಹಾಕುವುದು, ಕಲ್ಲು ತೂರಾಟಕ್ಕೆ ಅವಕಾಶ ನೀಡಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು: ಈ ನಡುವೆ, ಶಿವಮೊಗ್ಗ ಗಲಾಟೆ ಮತ್ತು ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗೃಹ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕಿಡಿಗೇಡಿಗಳು ಯಾರೇ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ದೂರವಾಣಿ ಮೂಲಕ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಭಾನುವಾರ ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಕಲ್ಲುತೂರಾಟ ನಡೆದು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಮಾತನಾಡಿ, 40 ಜನಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟದವಾಗಿದೆ. ಆ ಕಾರಣಕ್ಕಾಗಿ ಲಾಠಿ ಚಾರ್ಜ್ ಮಾಡಲಾಗಿದೆ. ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರು ಕ್ರಮ ತೆಗೆದುಕೊಂಡ ಬಳಿಕ ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಘಟನೆಗೂ ಮುನ್ನವೇ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೆವು: ಸಚಿವ ಡಾ.ಜಿ.ಪರಮೇಶ್ವರ್