ಶಿವಮೊಗ್ಗ : ಹರ್ಷನ ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಶಿವಮೊಗ್ಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಾಸುದೇವ ಕಾಮತ್ ದೂರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಷನ ಮೇಲೆ ಕಳೆದ ಎರಡು ತಿಂಗಳ ಹಿಂದೆ ಅಟ್ಯಾಕ್ ನಡೆದಿತ್ತು. ಈ ವೇಳೆಯೇ ಪೊಲೀಸರು ಕ್ರಮ ತೆಗೆದುಕೊಂಡಿದ್ದರೆ, ಈ ಕೊಲೆ ನಡೆಯುತ್ತಿರಲಿಲ್ಲ.
ಹರ್ಷನ ಕೊಲೆಯ ಹಿಂದೆ ಮತೀಯ ಸಂಘಟನೆಗಳಿವೆ. ಇದರಿಂದ ಹರ್ಷನ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂದು ಆಗ್ರಹಿಸಿದರು. ಹರ್ಷನ ಕೊಲೆಯಲ್ಲಿ ಬಂಧಿತರಾಗಿರುವವರು ಕೇವಲ ಪಾತ್ರಧಾರಿಗಳು, ಸೂತ್ರದಾರರನ್ನು ಕಂಡು ಹಿಡಿಯಬೇಕಾದ್ರೆ, ಇದರ ತನಿಖೆಯನ್ನು ಎನ್ಐಎ ನಿಂದ ನಡೆಸಿದರೆ ಉತ್ತಮವಾಗಿರುತ್ತದೆ ಎಂದರು.
ಎನ್ಐಎನಿಂದ ತನಿಖೆ ನಡೆಸಿ, ಆರೋಪಿಗಳನ್ನು ದೇಶಬಿಟ್ಟು ಓಡಿಸಬೇಕು ಹಾಗೂ ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕಾಗಿ ನಾವು ರಾಜ್ಯ ಸರ್ಕಾರದ ಮೇಲೆ ಒತ್ತಾಡವನ್ನು ಹಾಕುತ್ತೇವೆ. ಕೊಲೆಯಂತಹ ಬೆಳವಣಿಗೆಗಳು ದೇಶ ಕಟ್ಟುವ ಕೆಲಸಕ್ಕೆ ಅಡ್ಡಿಯಾಗುತ್ತವೆ.
ಆದರೆ, ಕೆಲ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿವೆ. ಇವರನ್ನು ಇಷ್ಟು ದಿನ ಬಿಟ್ಟಿದ್ದೆ ಜಾಸ್ತಿಯಾಯಿತು. ಪೊಲೀಸರ ವೈಫಲ್ಯದ ಕುರಿತು ಗೃಹ ಸಚಿವರಿಗೆ ತಿಳಿಸಿದ್ದೇವೆ. ಅವರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ : ಉಕ್ರೇನ್ನಲ್ಲಿ ಪುತ್ರಿಗೆ ಸಿಗದ ಆಹಾರ.. ಅನ್ನ-ನೀರು ಬಿಟ್ಟು ತಂದೆ-ತಾಯಿಯಿಂದ ಪ್ರಾರ್ಥನೆ..
ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಬೇಕೆಂದು ನಮ್ಮ ಎಲ್ಲಾ ಮುಖಂಡರು ಕಾರ್ಯಕರ್ತರಿಗೆ ತಿಳಿಸಿದ್ದರು. ಆದರೆ, ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ನಮ್ಮ ಮೆರವಣಿಗೆಯಲ್ಲಿ ಸೇರಿ ಕಲ್ಲು ತೂರಾಟ ಮಾಡಿದ್ದಾರೆ.
ಕಲ್ಲು ತೂರಾಟವನ್ನು ಯಾರೇ ನಡೆಸಿದ್ದರು ಸಹ ಅದು ತಪ್ಪು, ನಾವು ಕಲ್ಲು ತೂರಾಟ ಮಾಡಬಾರದೆಂದು ತಿಳಿಸಲಾಗಿತ್ತು. ಆದರೆ, ಕೊನೆಗೆ ಎಲ್ಲವೂ ನಮ್ಮ ಕೈಮೀರಿ ನಡೆದು ಹೋಯಿತು. ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದದ್ದೆ ಈ ಘಟನೆಗೆ ಕಾರಣವಾಗಿದೆ ಎಂದರು.
ಹರ್ಷನಿಗೆ ಓಡಾಡಲು ಬಿಡದೆ ಬೆದರಿಕೆ : ಹರ್ಷನಿಗೆ ಸ್ಥಳೀಯ ಕೆಲ ಅನ್ಯ ಕೋಮಿನವರು ಎಂಕೆಕೆ ರಸ್ತೆ, ಕೆ.ಆರ್.ಪುರಂ ರಸ್ತೆ, ಧ್ವಜದ ಕಟ್ಟೆ ಎಲ್ಲೆ ಹೋದರು ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹಿಂದೆ ನಮ್ಮ ಬಳಿಯೇ ಹೇಳಿದ್ದ. ನಾನೇ ಹರ್ಷನನ್ನು ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿದ್ದೆ ಎಂದು ವಿಹೆಚ್ಪಿ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ತಿಳಿಸಿದ್ದಾರೆ.
ಹರ್ಷನಿಗೆ ಜೀವ ಬೆದರಿಕೆ ಇದೆ ಎಂದು ದೊಡ್ಡಪೇಟೆಯ ಹಿಂದಿನ ಪಿಐ ವಸಂತ ಹಾಗೂ ಹಾಲಿ ಪಿಐ ಹರೀಶ್ ಪಟೇಲ್ರಿಗೆ ತಿಳಿಸಿದ್ದೆವು. ಹಂತಕರು ಮಚ್ಚು ಹಿಡಿದು ಓಡಾಡುವುದು, ಹರ್ಷನ ಮನೆ ಬಳಿಯೇ ಬಂದು ಬೆದರಿಕೆ ಹಾಕುವುದನ್ನು ಮಾಡಿದ್ದರು ಎಂದು ರಾಜೇಶ್ ಗೌಡ ತಿಳಿಸಿದ್ದಾರೆ.