ಶಿವಮೊಗ್ಗ: ನಗರದ ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಘಟನೆ ನಡೆದಿದೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತವನ್ನು ಅಲಂಕಾರ ಮಾಡಿದ್ದಲ್ಲದೆ, ವೀರ ಸಾವರ್ಕರ್ ಫ್ಲೆಕ್ಸ್ ಇರಿಸಲಾಗಿತ್ತು. ಆದರೆ ಕೆಲ ಯುವಕರು ಅದನ್ನು ತೆರವು ಮಾಡಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಘಟನೆ ಖಂಡಿಸಿ ಹಿಂದೂಪರ ಸಂಘಟನೆಯವರು ವೃತ್ತದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಮತ್ತೆ ಕಾರ್ಯಕರ್ತರು ಫ್ಲೆಕ್ಸ್ ಹಾಕಲು ಬಂದಾಗ ಪೊಲೀಸರು ತಡೆದಿದ್ದು, ಮಾತಿನ ಚಕಮಕಿ ಉಂಟಾಯಿತು.
ಈ ವೇಳೆ ನಾಲ್ಕೈದು ಜನರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಸದ್ಯ ಅಮಿರ್ ಅಹಮದ್ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಗರದ ಗಾಂಧಿ ಬಜಾರ್, ನೆಹರು ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟು ಬಂದ್ ಮಾಡಿ, ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಮಾಣಿಕ್ ಷಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನ; ಅಮೃತ ಘಳಿಗೆಗೆ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಮೆರಗು