ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಮಾದಕ ವಸ್ತು ಸೇವನೆ ಮಾಡುವವರನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿತ್ತು. ಈ ಹಿನ್ನೆಲೆ ಇದೀಗ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಗಾಂಜಾ ಟೆಸ್ಟ್ ಕಿಟ್ ಮೊರೆಹೋಗಿದ್ದಾರೆ.
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಂಜಾ ಟೆಸ್ಟಿಂಗ್ ಕಿಟ್ ಇಟ್ಟಿರುವ ಪೊಲೀಸರು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗಾಂಜಾ ಸೇವನೆ ಮಾಡುವವರನ್ನು ಪತ್ತೆಹಚ್ಚಲಾರಂಭಿಸಿದ್ದಾರೆ. ಟೆಸ್ಟಿಂಗ್ ಕಿಟ್ ಇಟ್ಟ ಕೆಲವೇ ದಿನದಲ್ಲಿ ಪಾಸಿಟಿವ್ ಬಂದ 9 ಜನರನ್ನು ಪೊಲೀಸರು ಬಂಧಿಸಿದ್ದು, 8 ಕೇಸ್ ದಾಖಲಾಗಿವೆ.
ಹೇಗೆ ಪರೀಕ್ಷಿಸುವುದು?:
ಗಾಂಜಾ ಮಾರಾಟದ ಬಗ್ಗೆ ಹೆಚ್ಚು ದೂರು ಬಂದ ಏರಿಯಾಗಳನ್ನೇ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಗಾಂಜಾ ಸೇವಿಸಿರಬಹುದು ಎಂಬ ಅನುಮಾನ ಬಂದ ಯುವಕರನ್ನು ಕರೆತಂದು ಯೂರಿನ್ ಟೆಸ್ಟ್ ಅನ್ನು ಗಾಂಜಾ ಪತ್ತೆ ಕಿಟ್ ಮೂಲಕ ಮಾಡಲಾಗುತ್ತಿದೆ. ಒಂದು ವೇಳೆ ಟೆಸ್ಟಿಂಗ್ ಕಿಟ್ನಲ್ಲಿ ಪಾಸಿಟಿವ್ ಬಂದರೆ, ಆ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಸೇರಿದಂತೆ ಹಲವು ತಾಲೂಕುಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಶಿವಮೊಗ್ಗದ ಟಿಪ್ಪುನಗರ, ಆರ್ಎಂಎಲ್ ನಗರ, ಅಣ್ಣಾ ನಗರ, ಸೂಳೆಬೈಲು ಭಾಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ. ಹೀಗಾಗಿ ಇದೀಗ ಪೊಲೀಸರು ಗಾಂಜಾ ಸೇವನೆ ಮಾಡುವವರು ಹಾಗೂ ಪೆಡ್ಲರ್ಗಳ ಹೆಡೆಮುರಿಕಟ್ಟಲು ನೂತನ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.