ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ, ಶಿವಮೊಗ್ಗದ ಇಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದರು.
ಯುವಕ ಹರ್ಷ ಮೃತದೇಹದ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಬಗ್ಗೆಯೂ ತನಿಖೆ ನಡೆಸಲಾಗುವುದು. ಈ ಬಗ್ಗೆ ಇನ್ನೂ ಎಫ್ಐಆರ್ ದಾಖಲಾದ ಬಳಿಕ ಸಕಲ ಕ್ರಮ ವಹಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಫೆ.23ರ ವರೆಗೆ ಕರ್ಫ್ಯೂ ಘೋಷಣೆ
ನಿನ್ನೆ ರಾತ್ರಿ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬಳಿಕ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ (ಸಿಆರ್‌ಪಿಸಿ ಸೆಕ್ಷನ್ 144) ಜಾರಿಗೊಳಿಸಲಾಗಿತ್ತು. ಬುಧವಾರ ಬೆಳಗ್ಗೆ 6 ಗಂಟೆವರೆಗೆ ಕರ್ಪ್ಯೂ ಆದೇಶ ಮುಂದುವರೆಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಯುವಕ ಹರ್ಷ ಕೊಲೆ ಬಗ್ಗೆ ಗೃಹ ಸಚಿವರ ವರದಿ ಕುರಿತು ನಾಳೆ ಮಾಹಿತಿ: ಸಿಎಂ
ಅಲ್ಲದೇ, ಶಿವಮೊಗ್ಗ ನಗರದಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಷೋಷಣೆ ಮಾಡಲಾಗಿತ್ತು. ನಾಳೆಯೂ ರಜೆ ಮುಂದುವರೆಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.