ಶಿವಮೊಗ್ಗ: ಹೆಚ್ಚಿನ ಆತ್ಮಹತ್ಯೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣವಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯಿಂದ ಕಾಪಾಡಬಹುದು ಎಂದು ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಹೇಳಿದರು.
ನಗರದಲ್ಲಿ ಖಾಸಗಿ ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶೇಕಡ 90% ರಷ್ಟು ಆತ್ಮಹತ್ಯೆಗಳು ಮನೋರೋಗದಿಂದ ಆದರೆ, ಇನ್ನೂ ಶೇಕಡ 10% ರಷ್ಟು ತಾಳ್ಮೆ ಇಲ್ಲದೆ ದುಡುಕಿನಿಂದ ತೆಗೆದುಕೊಳ್ಳುವ ನಿರ್ಧಾರಗಳಿಂದ ಆಗುತ್ತವೆ. ಈ ಕಾರಣದಿಂದಾಗಿ ಜೀವನದಲ್ಲಿ ತಾಳ್ಮೆ ಅಗತ್ಯ ಹಾಗೂ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಇದ್ದಾಗ ಅದನ್ನು ಆಪ್ತರೊಂದಿಗೆ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.
ರಸ್ತೆ ಅಪಘಾತಗಳನ್ನು ಹೊರತು ಪಡಿಸಿದರೆ ಯುವ ಜನತೆ ಹೆಚ್ಚಿನದಾಗಿ ಸಾವಿಗೀಡಾಗುತ್ತಿರುವುದು ಆತ್ಮಹತ್ಯೆಯಿಂದಾಗಿದೆ. ನಮ್ಮ ಜಿಲ್ಲೆಯಲ್ಲೆ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮನಸ್ಸಿನ ನೋವುಗಳು ಇನ್ನೊಬ್ಬರಿಗೆ ಹೇಳಿಕೊಂಡಾಗ ಕಡಿಮೆಯಾಗುತ್ತವೆ. ಆ ಕಾರಣದಿಂದ ಸಲಹೆಗಳನ್ನು ನೀಡಲೇ ಬೇಕೆಂದಿಲ್ಲ ತಾಳ್ಮೆಯಿಂದ ನಾವು ಕೇಳಿಸಿಕೊಂಡರು ಸಾಕು, ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಅವರ ಸಮಸ್ಯೆ ಹಾಗೂ ನ್ಯೂನ್ಯತೆಗಳನ್ನು ಅಣಕಿಸಬಾರದು ಎಂದು ಸಲಹೆ ನೀಡಿದರು.