ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ತಮ್ಮ ಸ್ವಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ತೀರ್ಥಹಳ್ಳಿ ತಾಲೂಕಿನ ನೆರಟೂರು ಪಂಚಾಯಿತಿ ವ್ಯಾಪ್ತಿಯವ ತೃಣಕಲ್ಲು, ಹೊನ್ನೆತಾಳು ಪಂಚಾಯಿತಿ ವ್ಯಾಪ್ತಿಯ ಚಂಗಾರುವಿನಲ್ಲಿ ಬಿದ್ದ ಮನೆಗಳ ವೀಕ್ಷಣೆ ನಡೆಸಿದರು. ನಂತರ ಆಗುಂಬೆಯ ಹಂದಲಸು ಮಳಲಿ ಭಾಗದಲ್ಲಿ ಬಿದ್ದ ಮನೆಗಳ ವೀಕ್ಷಣೆ ಹಾಗೂ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚಿಸಿದರು.
ಬಿದ್ದ ಮನೆಗೆ ಪರಿಹಾರ ನೀಡಿದ ಕಾಗೋಡು ತಿಮ್ಮಪ್ಪ: ಸಾಗರದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಸಾಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾಗರ ತಾಲೂಕಿನ ಆಚಾಪುರ ಹಾಗೂ ಗೌತಮಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 80 ರ ಹರೆಯದಲ್ಲಿ ಕಾಗೋಡು ತಿಮ್ಮಪ್ಪನವರು ಮಳೆಯಲ್ಲಿ ನೊಂದವರ ನೆರವಿಗೆ ಧಾವಿಸಿ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಇದೇ ವೇಳೆ, ಆಚಾಪುರದ ಪ್ಯಾರಿಜಾನ್ ಅವರ ಮನೆ ಮಳೆಯಿಂದ ಬಿದ್ದು ಹೋಗಿತ್ತು. ಇವರಿಗೆ ಆರ್ಥಿಕ ಸಹಾಯ ಮಾಡಿದರು. ಅದೇ ರೀತಿ ಗೌತಮಪುರದ ನಾಗಮ್ಮ ಎಂಬುವರ ಮನೆ ಸಹ ಬಿದ್ದು ಹೋಗಿದ್ದು, ಇವರಿಗೂ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಸರ್ಕಾರ ಮನೆ ಕಳೆದು ಕೊಂಡವರಿಗೆ ತಕ್ಷಣ ಅವರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ