ಶಿವಮೊಗ್ಗ: ನೂರು ದಿನದ ಈ ಸಂಘಟನೆಯ ಕೆಲಸ ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಏಕೆಂದರೆ ಸಂಘಟನೆಯ ಭಾಗವಾಗಿ ಇಡೀ ರಾಜ್ಯಾದಾದ್ಯಂತ 15 ಜಿಲ್ಲೆಗಳು ಹಾಗೂ ಸುಮಾರು 80 ತಾಲೂಕುಗಳಿಗೆ ಪ್ರವಾಸ ಮಾಡಿದ್ದೇವೆ. ಎಲ್ಲರೂ ಕೂಡಾ ಅತ್ಯಂತ ಸಂತೋಷದಿಂದ ಇದ್ದಾರೆ. ಸರ್ಕಾರಕ್ಕೆ ಉತ್ತಮವಾದ ಹೆಸರು ತರಬೇಕೆಂಬ ಉದ್ದೇಶದಿಂದ ನೌಕರರು ಕೆಲಸ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.
ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ನೂರು ದಿನಗಳಲ್ಲಿ ಮಾಡಿರುವ ಸಂಘದ ಕೆಲಸ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಸಾಕಷ್ಟು ಬೇಡಿಕೆ ಮತ್ತು ಸರ್ಕಾರದಿಂದ ಆಗಬೇಕಾಗಿರುವ ಕೆಲಸಗಳಾಗಿವೆ. ಇನ್ನೂ ಬೇಕಾದಷ್ಟು ಕೆಲಸಗಳು ಬಾಕಿ ಉಳಿದಿವೆ. ಮುಂದಿನ ನಾಲ್ಕೂವರೆ ವರ್ಷದಲ್ಲಿ ಹಂತ ಹಂತವಾಗಿ ಸರ್ಕಾರಿ ನೌಕರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಸರ್ಕಾರಿ ನೌಕರರ ಪ್ರಮುಖವಾದ ಉದ್ದೇಶ ಕೇವಲ ಸೌಲಭ್ಯಗಳನ್ನು ಪಡೆಯುವುದಲ್ಲ. ಮೊದಲು ಜನಸ್ನೇಹಿ ಕೆಲಸ ಮಾಡಬೇಕು. ಜನರ ಪ್ರೀತಿ ಗಳಿಸಬೇಕು ಎಂಬುದು ಸಂಘದ ಹಂಬಲ. ಇದಕ್ಕಾಗಿ ಎಲ್ಲಾ ಕಡೆಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ನೌಕರರಿಗೆ ಕಾರ್ಯಾಗಾರದ ಮೂಲಕ ಮನವರಿಕೆ ಮಾಡಿಕೊಡಲಾಗುತ್ತಿದೆ. ಪ್ರಜಾಸ್ನೇಹಿ ಆಡಳಿತ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಳೆದ ನೂರು ದಿನಗಳಲ್ಲಿ ಸರ್ಕಾರಿ ನೌಕರ ಸಂಘವು ಹಲವು ಸಾಧನೆಗಳನ್ನು ಮಾಡಿದೆ. ಕೇವಲ ಅನಾಮಧೇಯ ಪತ್ರಗಳ ಮೇಲೆ ನೌಕರರ ವಿರುದ್ಧ ಅನಗತ್ಯ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಈಗ ಬಿಡುಗಡೆಯಾಗಿ ಅನಾಮಧೇಯ ಪತ್ರಗಳಿಗೆ ಕಡಿವಾಣ ಹಾಕಲು ಸರ್ಕಾರ ಆದೇಶ ನೀಡಿದೆ ಎಂದರು.
ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿ ಜಂಟಿ ಸಮಾಲೋಚನಾ ಸಮಿತಿ ರಚನೆ, ನೌಕರರ ಮೇಲೆ ಹಲ್ಲೆ ತಡೆಗಟ್ಟುವುದು, ಸೇವಾ ಸೌಲಭ್ಯಗಳ ಪಾವತಿ ವಿಳಂಬ ತಪ್ಪಿಸುವುದು, ಎಲ್ಲಾ ಸರ್ಕಾರಿ ನೌಕರರು ಸಂಪೂರ್ಣ ನಗದು ರಹಿತ ಚಿಕಿತ್ಸೆ ಒದಗಿಸುವುದು ಇವೆಲ್ಲವೂ ನೂರು ದಿನಗಳ ಸಾಧನೆಯಾಗಿದೆ ಎಂದರು.