ಶಿವಮೊಗ್ಗ: ನೆರೆ ಬಾಧಿತ ಪ್ರದೇಶಗಳಲ್ಲಿ ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ಪಡೆದ ಸಾಲಗಳ ಪುನರ್ ರಚನೆ ಅಥವಾ ಮರುಪಾವತಿಗೆ ಕಂತುಗಳ ಮುಂದೂಡಿಕೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಜನರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ನೀಡಿಕೆಯಲ್ಲಿನ ಬೆಳವಣಿಗೆ ಹಾಗೂ ವಿಳಂಬದ ಕುರಿತು ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳೊಂದಿಗೆ ಅವರು ಚರ್ಚಿಸಿ ಕಂತುಗಳ ಮುಂದೂಡಿಕೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಸಾಲದ ಕಂತುಗಳನ್ನು ಮುಂದೂಡುವುದರ ಜೊತೆಗೆ ಬೆಳೆದ ಬೆಳೆಗೆ ಎಕರೆವಾರು ನಿಗದಿಪಡಿಸಿದ ಸಾಲವನ್ನು ಸಹ ರೈತರು ಪಡೆಯಬಹುದಾಗಿದ್ದು, ಈ ಕುರಿತು ಬ್ಯಾಂಕ್ ಸಿಬ್ಬಂದಿ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ವಿಷಯದಲ್ಲಿ ವಿಳಂಬ ಮಾಡದಂತೆ ಅವರು ಸೂಚಿಸಿದರು.
ರೈತರು ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಸಾಲ ಮರುಪಾವತಿಗೆ ಕಿರುಕುಳ ನೀಡುವುದು ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಈ ಕುರಿತು ಬ್ಯಾಂಕ್ ಅಧಿಕಾರಿಗಳು ರೈತರಿಗೆ ತೊಂದರೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.