ಶಿವಮೊಗ್ಗ : ನನಗೆ ನ್ಯಾಯಾಲಯದ ಮೇಲೆ ಗೌರವವಿದೆ. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಜನಪ್ರತಿನಿಧಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಎರಡು ವರ್ಷದ ಹಿಂದೆ ರೈತರ ಪರವಾಗಿ ಪ್ರತಿಭಟನೆ ನಡೆಸಿದ ಪರಿಣಾಮ ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ಕೇಸ್ ದಾಖಲು ಮಾಡಿತ್ತು.
ಶಿವಮೊಗ್ಗದ ಕಾಡಾ ಕಚೇರಿ ಮುಂದೆ ಭದ್ರಾ ಕಾಲುವೆಯಲ್ಲಿ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಅಣೆಕಟ್ಟೆಯಲ್ಲಿ ನೀರು ಇದ್ದರೂ ಸಹ ನೀರು ಬಿಡುವ ಬಗ್ಗೆ ಅಂದಿನ ಅಧ್ಯಕ್ಷರು ಹಾಗೂ ಅಧಿಕಾರಿಗಳು ಲಿಖಿತ ಉತ್ತರ ನೀಡಲು ನಿರಾಕರಿಸಿದರು. ಇದರಿಂದ ಪ್ರತಿಭಟನೆ ನಡೆಸಬೇಕಾಯಿತು. ಆದರೆ, ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ಕೇಸ್ ದಾಖಲು ಮಾಡಿತ್ತು. ರೈತರ ಮೇಲೆ ಕೇಸ್ ಹಾಕಿದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದು ಕೊಂಡಿತು.
ಏಪ್ರಿಲ್ 3ರಂದು ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್ ಅವರ ನಾಮಪತ್ರ ಸಲ್ಲಿಕೆಗೆ ಹೋಗಿದ್ದೆ. ಇಂದು ಶಿಮುಲ್ ಚುನಾವಣೆಯಲ್ಲಿ ಭಾಗಿಯಾಗಿದ್ದೇನೆ. ಇದರಿಂದ ಕೋರ್ಟ್‌ಗೆ ಹಾಜರಾಗಲು ಆಗಿಲ್ಲ. ಕೋರ್ಟ್‌ಗೆ ಹಾಜರಾಗದೆ ಇದ್ರೆ, ಕೋರ್ಟ್ ವಾರೆಂಟ್ ಜಾರಿ ಮಾಡುತ್ತದೆ. ಅದು ಸಹಜ. ಇದರಿಂದ ನಮ್ಮ ವಕೀಲರ ಜೊತೆ ಮಾತನಾಡಿ ಕೋರ್ಟ್‌ಗೆ ಹಾಜರಾಗುತ್ತೇನೆ ಎಂದು ಸ್ಪಷ್ಟನೆ ನೀಡಿದರು.