ಶಿವಮೊಗ್ಗ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 6000 ಮತದಾರ ಪೈಕಿ 600 ಮಂದಿ ಮತ ಚಲಾಯಿಸಿದ್ದರು.ಆದರೆ ಚುನಾವಣಾ ಅಧಿಕಾರಿಗಳ ತಪ್ಪಿನಿಂದಾಗಿ ಮತಪತ್ರಗಳ ಗೊಂದಲ ಸೃಷ್ಟಿಯಾಯಿತು.
ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಅಭ್ಯರ್ಥಿಗಳ ಪೋಟೋ, ಚಿಹ್ನೆ ಇರುವ ಸ್ಥಳದಲ್ಲಿ ಬೀದರ್ ಜಿಲ್ಲೆಯ ನಿರ್ದೇಶಕರ ಪೋಟೋ, ಚಿಹ್ನೆ ಇರುವ ಮತಪತ್ರಗಳಿದ್ದವು. ಇದರಿಂದಾಗಿ ಮತ ಕೇಂದ್ರದಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಕೂಡಲೆ ಮತಗಟ್ಟೆ ಬಳಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.
ಗೊಂದಲ ಆರಂಭವಾಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಲಾರಂಭಿಸಿದರು. ಆ ಕೂಡಲೇ 9 ಬೂತ್ ನಲ್ಲಿ ನಡೆಯುತ್ತಿದ್ದ ಮತದಾನ ಸ್ಥಗಿತಗೊಳಿಸಲಾಯಿತು. ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಮತ್ತೋಂದು ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಅಭ್ಯರ್ಥಿಗಳು ಹಾಗೂ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸಹ ಅಭ್ಯರ್ಥಿಗಳು, ಚುನಾವಣಾಧಿಕಾರಿ ಅವರನ್ನು ಪ್ರತ್ಯೇಕ್ಷ ಕೊಠಡಿಯಲ್ಲಿ ಕೂರಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿದರು. ಬಳಿಕ ಚುನಾವಣಾಧಿಕಾರಿಗಳು ಚುನಾವಣೆ ರದ್ದುಗೊಂಡಿದ್ದನ್ನು ಘೋಷಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಮಾಹಿತಿ ನೀಡಿದರು.
ಇನ್ನೂ ಚುನಾವಣೆಗಾಗಿ ಮನೆ ಮನೆ ಸುತ್ತಿ ಮತದಾರರನ್ನು ಮನವೊಲಿಸಿದ್ದ ಅಭ್ಯರ್ಥಿಯ ಕುಟುಂಬವೊಂದು ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿತು. ಅಭ್ಯರ್ಥಿಯ ಪತಿ ಶ್ರೀನಿವಾಸ್ ಅವರು ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. ಇದನ್ನು ನೋಡುತ್ತಿದ್ದಂತೆ ಅವರ ಪತ್ನಿ, ಅಭ್ಯರ್ಥಿ ಮಂಜುಳಾ ಮತ್ತು ಮಕ್ಕಳು ಸಹ ಕಣ್ಣೀರು ಹಾಕಲು ಆರಂಭಿಸಿದರು.