ಶಿವಮೊಗ್ಗ: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಳ್ಳುತ್ತಿದಂತೆ ಜಿಲ್ಲೆಯ ಪ್ರಭಾವಿ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿವಿಧ ಸಂಘಟನೆಗಳು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿವೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಜೊತೆ ಜೊತೆಗೆ ಬೆಳೆದು ಬಂದವರು. ಪಕ್ಷ ಸಂಘಟನೆಯನ್ನೂ ಸಹ ಇಬ್ಬರೂ ಸೇರಿಯೇ ಮಾಡಿದ್ದಾರೆ. ಬಿಎಸ್ವೈ ಮಾಸ್ ಲೀಡರ್ ಆಗಿ ಬೆಳೆದರೆ, ಈಶ್ವರಪ್ಪ ಹಿಂದುಳಿದ ಸಮುದಾಯಗಳ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜೊತೆಗೆ ಹಿರಿಯರು ಆಗಿರುವ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
'ಡಿಸಿಎಂ ಸ್ಥಾನ ನೀಡಬೇಕು, ಇಲ್ಲವಾದರೆ ಹೋರಾಟ'
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈಶ್ವರಪ್ಪ ಶ್ರಮಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿದ್ದಾರೆ. ಜೊತೆಗೆ ಪ್ರಮುಖ ಸಚಿವ ಸ್ಥಾನಗಳನ್ನು ನಿರ್ವಹಿಸಿದ ಅನುಭವವಿದೆ. ಅಲ್ಲದೆ ಇದುವರೆಗೆ ಯಾವುದೇ ಆರೋಪಗಳು ಇಲ್ಲದಂತೆ ಕೆಲಸ ಮಾಡಿದ್ದಾರೆ ಹಾಗೂ ಸಚಿವರಾಗಿ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದಾರೆ. ಆದ ಕಾರಣ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು, ಇಲ್ಲವಾದರೆ ಹೋರಾಟ ಮಾಡುವುದಾಗಿ ಕೆಎಸ್ಈ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.