ಶಿವಮೊಗ್ಗ : ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ಖಂಡನೀಯ. ತಿದ್ದುಪಡಿ ಹಿಂಪಡೆಯದಿದ್ರೆ ಪಕ್ಷ ವತಿಯಿಂದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ನಗರದಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಇದರಿಂದಾಗಿ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬಂಡವಾಳಶಾಹಿಗಳಿಗೆ ಹಾಗೂ ಉಳ್ಳವರಿಗೆ ಭೂಮಿ ಖರೀದಿ ಮಾಡಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಬಿಜೆಪಿ ಈ ಹಿಂದೆ ಬಂಡವಾಳಶಾಹಿಗಳಿಂದ ಹಾಗೂ ದೊಡ್ಡ ದೊಡ್ಡ ಉದ್ದಿಮೆದಾರರಿಂದ ಹಣ ಪಡೆದಿದೆ. ಆ ಹಣದಿಂದಲೇ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿಕೊಂಡಿದೆ. ಇದೀಗ ಅವರ ಋಣ ತೀರಿಸುವ ಸಲುವಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದರು. ಭೂ ಸುಧಾರಣಾ ಕಾಯ್ದೆಯಿಂದ ರೈತರು ಸಂಪೂರ್ಣ ಸರ್ವನಾಶ ಆಗಲಿದ್ದಾರೆ. ಈಗಾಗಲೇ ಎಪಿಎಂಸಿ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸಿಕೊಂಡೇ ಬಂದಿದೆ.
ಈ ಕಾಯ್ದೆಗಳು ತಿದ್ದುಪಡಿ ಮಾಡಿರುವುದಕ್ಕೆ ನ್ಯಾಯಾಲಯ ಛೀಮಾರಿ ಹಾಕಿದ್ದರೂ ಮತ್ತೆ ಇದೀಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ. ಕೇಂದ್ರ ಸರ್ಕಾರದ ಇಂತಹ ಕ್ರಮಗಳು ಖಂಡನಿಯ ಎಂದರು.