ಶಿವಮೊಗ್ಗ: ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಹರಡದಂತೆ ತಡೆಯಲು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿನೂತನ ಪ್ರಯತ್ನ ನಡೆದಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜೈಲಿನಲ್ಲಿ ಸೆನ್ಸಾರ್ ಸ್ಯಾನಿಟೈಸರ್ ಬೂತ್ ತೆರೆಯಲಾಗಿದೆ.
ಜೈಲು ಹಕ್ಕಿಗಳನ್ನು ಕೊರೊನಾದಿಂದ ದೂರವಿಡುವ ಉದ್ದೇಶದಿಂದ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯು ಪ್ರತಿ ಕೇಂದ್ರ ಕಾರಾಗೃಹದಲ್ಲೂ ಸೆನ್ಸಾರ್ ಸ್ಯಾನಿಟೈಸರ್ ಬೂತ್ ಸ್ಥಾಪನೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ರಾಜ್ಯದ ಮೊದಲ ಸ್ಯಾನಿಟೈಸರ್ ಬೂತ್: ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಆದೇಶ ಹೊರ ಬಿಳುತ್ತಿದ್ದಂತೆಯೇ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸ್ಯಾನಿಟೈಸರ್ ಬೂತ್ ಸ್ಥಾಪನೆ ಮಾಡಲಾಗಿದೆ. ಇಲ್ಲಿನ ಜೈಲಿನ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್ ಸೆನ್ಸಾರ್ ಸ್ಯಾನಿಟೈಸರ್ ಬೂತ್ ಸ್ಥಾಪಿಸಿದ್ದಾರೆ.
ಸ್ಯಾನಿಟೈಸರ್ ಬೂತ್ ಸಂಪೂರ್ಣ ಸೆನ್ಸಾರ್ ಆಧಾರಿತವಾಗಿದೆ. ವ್ಯಕ್ತಿ ಬೂತ್ ಒಳಗೆ ಹೋದರೆ ಸೆನ್ಸಾರ್ನಿಂದಾಗಿ ಸ್ಯಾನಿಟೈಸರ್ ಸಿಂಪಡಣೆ ಆಗುತ್ತದೆ. ಈ ವೇಳೆ ಒಳಗೆ ಹೋದವರು 360 ಡಿಗ್ರಿಯಲ್ಲಿ ಸುತ್ತಿದರೆ ಸಂಪೂರ್ಣ ಸ್ಯಾನಿಟೈಸ್ ಆಗುತ್ತಾರೆ ಎಂದರು.
ಒಟ್ಟು 1.02 ಲಕ್ಷ ರೂ. ವೆಚ್ಚದಲ್ಲಿ ಬೂತ್ ನಿರ್ಮಾಣವಾಗಿದೆ. ಜೈಲಿನ ಸಿಬ್ಬಂದಿ, ಹೊಸ ಕೈದಿಗಳು ಸೇರಿದಂತೆ ಎಲ್ಲರೂ ಸಹ ಬೂತ್ ಮೂಲಕವೇ ಒಳಗೆ ಹೋಗಬೇಕು.
ಕೊರೊನಾ ಹಾವಳಿ ಪ್ರಾರಂಭವಾದಗಿನಿಂದ ಜೈಲಿಗೆ ಬರುವ ಎಲ್ಲಾ ಹೊಸ ಕೈದಿ, ವಿಚಾರಣಾಧೀನ ಕೈದಿಗಳನ್ನು ಜೈಲ್ನಲ್ಲಿಯೇ ಒಂದು ವಾರ ಪ್ರತ್ಯೇಕ ಸೆಲ್ನಲ್ಲಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಅಲ್ಲದೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನಾ ಅವರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ. ಈ ಕಾರಾಗೃಹದಲ್ಲಿ 560 ಪುರುಷ ಹಾಗೂ 100 ಮಹಿಳಾ ಕೈದಿಗಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.