ಶಿವಮೊಗ್ಗ: ಜಿಲ್ಲೆಯ ಖಜಾನೆ ಮತ್ತು ಸರ್ಕಾರಿ ವಿಮಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಇಲಾಖೆಗೆ ಬರುವ ನೌಕರರು ಹಾಗೂ ಸಿಬ್ಬಂದಿಯೊಂದಿಗೆ ಸಮನ್ವಯತೆ ಸಾಧಿಸಿ, ನೌಕರಸ್ನೇಹಿ ಕಾರ್ಯಗಳನ್ನು ನಿರ್ವಹಿಸುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
![state employee president shadakashari visits to shimogha](https://etvbharatimages.akamaized.net/etvbharat/prod-images/kn-smg-05-stateemployeepresident-ka10011_02092020190218_0209f_1599053538_217.jpg)
ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರಿ ವಿಮಾ ಇಲಾಖೆ ಹಾಗೂ ಖಜಾನೆ ಇಲಾಖೆಗೆ ಭೇಟಿ ನೀಡಿ ಇಲಾಖೆಯ ಹಾಗೂ ನೌಕರರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಿಮಾ ಇಲಾಖೆಯ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಇಲಾಖಾ ಆಯುಕ್ತರೊಂದಿಗೆ ಚರ್ಚಿಸಲಾಗಿದ್ದು, ಹಂತಹಂತವಾಗಿ ಸಮಸ್ಯೆಗಳು ಇತ್ಯರ್ಥಗೊಳ್ಳುವ ಬಗ್ಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ವಿಮಾ ಇಲಾಖೆಯ ಕಚೇರಿಯಲ್ಲಿ ಬಹುದಿನಗಳಿಂದ ದಾಖಲೆ ನಿರ್ವಹಣೆ ತ್ರಾಸದಾಯಕವಾಗಿರುವುದು ಹಾಗೂ ನೌಕರರಿಗೆ ತ್ವರಿತವಾಗಿ ಸೇವೆ ನೀಡಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಸರ್ಕಾರಕ್ಕೆ ಈ ಹಿಂದೆ ಮಾಡಿದ ಮನವಿಯಂತೆ ಈ ಗಣಕೀಕರಣ ಕಾರ್ಯ ಡಿಸೆಂಬರ್ ಮಾಸಾಂತ್ಯದಲ್ಲಿ ಪೂರ್ಣಗೊಂಡು ನೌಕರರ ಸೇವೆಗೆ ಮುಕ್ತಗೊಳ್ಳಲಿದೆ. ಇದರಿಂದಾಗಿ ನೌಕರರ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಶಿಕ್ಷಣ, ಪೊಲೀಸ್ ಇಲಾಖೆ ಹಾಗೂ ತುರ್ತು ಅಗತ್ಯವಿರುವ ನೌಕರರ ಕಡತಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಅನುಕೂಲ ಕಲ್ಪಿಸುವಂತೆ, ನೌಕರರಿಂದ ದೂರುಗಳು ಬಾರದಂತೆ, ಯಾವುದೇ ವಿಮಾದಾರನು ನೇರವಾಗಿ ತಮ್ಮನ್ನು ಭೇಟಿಯಾಗಿ ಸೌಲಭ್ಯಗಳನ್ನು ಹೊಂದಲು ಹಾಗೂ ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ನೌಕರ ಸ್ನೇಹಿ ವಾತಾವರಣ ನಿರ್ಮಿಸುವಂತೆ ಜಿಲ್ಲಾ ವಿಮಾ ಅಧಿಕಾರಿ ಗೀತಾಬಾಯಿ ಅವರಿಗೆ ಮನವಿ ಮಾಡಿದರು.
ನಂತರದಲ್ಲಿ ಖಜಾನೆಗೆ ಭೇಟಿ ನೀಡಿದ ಸಿ.ಎಸ್. ಷಡಾಕ್ಷರಿ, ಅಲ್ಲಿನ ನೌಕರರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಹವಾಲುಗಳನ್ನು ಪಡೆದರು. ನೌಕರರ ಅನುಕೂಲಕ್ಕೆ ಶೌಚಾಲಯ ವ್ಯವಸ್ಥೆ ಶೀಘ್ರವೇ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.