ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವಾಪರ ತಿಳಿಯದೇ ಯಾವುದೇ ವಿಡಿಯೋ ಶೇರ್ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ಎಚ್ಚರಿಕೆ ನೀಡಿದ್ದಾರೆ.
ಮೇ 11ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತಹ ವಿಡಿಯೋಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಹಲ್ಲೆಗೊಳಗಾದ ವ್ಯಕ್ತಿಯು ಚಿಕಿತ್ಸೆ ಪಡೆಯಲು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದು, ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ ಎಂದರು.
ಘಟನೆ ವಿವರ : ಹಲ್ಲೆಗೊಳಗಾದ ವ್ಯಕ್ತಿಯು ಮಾತನಾಡಲು ಅಸಮರ್ಥನಾಗಿದ್ದು, ಕೇವಲ ಸಂಜ್ಞೆಗಳ ಮೂಲಕ ಮಾತನಾಡಲು ಶಕ್ತನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಂಜ್ಞೆಗಳ ಭಾಷೆ ಪರಿಣಿತರನ್ನು ಕರೆಸಿ ವ್ಯಕ್ತಿ ಹೇಳುತ್ತಿರುವುದನ್ನು ತಿಳಿದುಕೊಳ್ಳಲಾಗಿದೆ. ಈ ಮೂಕ ವ್ಯಕ್ತಿಯು ನಲ್ಲಿಸರ ಗ್ರಾಮದ ಹತ್ತಿರ ನಡೆದುಕೊಂಡು ಬರುವಾಗ ರಸ್ತೆ ಅಪಘಾತವಾಗಿದ್ದು, ಆಗ ಅಪಘಾತ ನಡೆಸಿದ ಕಾರಿನ ಚಾಲಕ, ಸವಾರ ಹಾಗೂ ಮೂಕ ವ್ಯಕ್ತಿಗೆ ಜಗಳವಾಗಿದ್ದು, ಅವರು ಈತನಿಗೆ ಕೈಯಿಂದ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಲಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ವಿಡಿಯೋ/ಸಂದೇಶಗಳು ಪ್ರಸಾರವಾದಾಗ ಅದರ ಪೂರ್ವಾಪರ ತಿಳಿಯದೇ ಅದನ್ನು ಫಾರ್ವರ್ಡ್ ಮಾಡುವುದು ಶಿಕ್ಷಾರ್ಹವಾಗಿದೆ. ಯಾವುದೇ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಈ ವಿಡಿಯೋವನ್ನು ವಿವಿಧ ಪಂಗಡ/ಧರ್ಮದ ನಡುವೆ ದ್ವೇಷ ಭಾವನೆ, ಭಿನ್ನಾಭಿಪ್ರಾಯ ಉಂಟಾಗುವ ರೀತಿ ಪ್ರಚಾರ ಮಾಡಿದರೆ ಅಂತವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.