ಶಿವಮೊಗ್ಗ: ಆಸ್ತಿಯನ್ನು ನೀಡಲಿಲ್ಲ ಎಂದು ಮಕ್ಕಳೇ ತಂದೆಯನ್ನು ಸುಪಾರಿ ನೀಡಿ ಮರ್ಡರ್ ಮಾಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಪಾರಿ ಮರ್ಡರ್ ಮಾಡಿಸಿದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರದ ನಿವಾಸಿ ನಾಗೇಂದ್ರಪ್ಪ ಎಂಬುವರೇ ತಮ್ಮ ಮಕ್ಕಳಿಂದಲೇ ಕೊಲೆಯಾದ ದುರ್ದೈವಿ. ನಾಗೇಂದ್ರಪ್ಪನ ಮಕ್ಕಳಾದ ಮಂಜುನಾಥ್ (42) ಹಾಗೂ ಉಮೇಶ್ (40) ಕೊಲೆಗೆ ಸುಪಾರಿ ನೀಡಿದ್ದರು. ರಿಜ್ವಾನ್ ಅಹ್ಮದ್(24), ಹಬೀಬ್ ಉಲ್ಲಾ(28) ಮತ್ತು ಸುಹೇಲ್ ಬಾಷಾ (30) ಎಂಬುವವರೇ ಕೊಲೆ ಮಾಡಿದ ಆರೋಪಿಗಳು.
ನವೆಂಬರ್ 29 ಎಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಿ ಗ್ರಾಮದ ಬಳಿ ನಾಗೇಂದ್ರಪ್ಪನ ಶವ ಚರಂಡಿಯಲ್ಲಿ ಪತ್ತೆಯಾಗಿರುತ್ತದೆ. ಶವದ ಸ್ಥಿತಿಯನ್ನು ಕಂಡು ಶಿರಾಳಕೊಪ್ಪ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೃತ ನಾಗೇಂದ್ರಪ್ಪನ ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್ ಕೊಲೆಗೆ ಸುಪಾರಿ ನೀಡಿದ್ದರು ಎಂಬ ಅಂಶ ತಿಳಿಯುತ್ತದೆ. ಇದರಲ್ಲಿ ಉಮೇಶ್ ಪೊಲೀಸ್ ಇಲಾಖೆಯ ಕೆಎಸ್ಆರ್ಪಿ ಬೆಂಗಳೂರು 4 ಬೆಟಾಲಿಯನ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ.
ಆಸ್ತಿಯನ್ನು ನಾಗೇಂದ್ರಪ್ಪ ತನ್ನ ಎರಡನೇ ಹೆಂಡತಿಗೆ ನೀಡಿದ್ದೆ ಸುಫಾರಿಗೆ ಕಾರಣ
ಮೃತ ನಾಗೇಂದ್ರಪ್ಪನ ಮೊದಲನೆ ಮಡದಿ ತೀರಿ ಹೋಗಿ ಬಹಳ ದಿನಗಳಾಗಿತ್ತು. ಇದರಿಂದ ಮಕ್ಕಳು ಸೊಸೆಯವರು ಸೇರಿ ನಾಗೇಂದ್ರಪ್ಪನಿಗೆ ಶಿರಾಳಕೊಪ್ಪ ಸಮೀಪದ ನೆರಲಗಿ ಗ್ರಾಮದ ಸವಿತಾ ಎಂಬುವರನ್ನು ಎರಡನೇ ಮದುವೆ ಮಾಡಿಸಿರುತ್ತಾರೆ. ಇವರಿಗೆ ಕಳೆದ ಆರು ತಿಂಗಳ ಹಿಂದೆ ಗಂಡು ಮಗುವಾಗಿರುತ್ತದೆ. ಬೋಗಿ ಗ್ರಾಮದಲ್ಲಿ ಇರುವ ಐದೂವರೆ ಎಕರೆ ಭೂಮಿ ಇದೆ.
ಇದರಲ್ಲಿ ಐದು ಎಕರೆಯಲ್ಲಿ ಅಡಕೆಯನ್ನು ಉಳಿದ ಅರ್ಧ ಎಕರೆಯಲ್ಲಿ ಭತ್ತವನ್ನು ಬೆಳೆಯುತ್ತಿದ್ದರು. ಈ ಭೂಮಿಯನ್ನು ಭಾಗ ಮಾಡಿಕೊಡಲು ಮಕ್ಕಳಿಬ್ಬರು ನಾಗೇಂದ್ರಪ್ಪನಿಗೆ ಕೇಳಿದಾಗ ಭಾಗ ಮಾಡಲು ಆತ ಒಪ್ಪಿರಲಿಲ್ಲ.
ಆಗ ಮಕ್ಕಳಿಬ್ಬರು ಪಂಚಾಯಿತಿ ನಡೆಸಿ ಭೂಮಿ ಭಾಗ ಮಾಡಿ ಅಳತೆಗೆ ಹೋದಾಗ ನಾಗೇಂದ್ರಪ್ಪ ಗಲಾಟೆ ಮಾಡಿದ್ದನು. ಅಲ್ಲದೇ ಮಗ ಉಮೇಶ್ ಈ ಕುರಿತು ಭದ್ರಾವತಿ ಕೋರ್ಟ್ ನಲ್ಲಿ ಕೇಸು ದಾಖಲಿಸಿ ಭೂಮಿ ಯಾರಿಗೂ ಪರಭಾರೆಯಾಗದಂತೆ ಮಾಡಿದ್ದರು.
ಅಲ್ಲದೆ, ನಾಗೇಂದ್ರಪ್ಪ ಸೈಟು ತೆಗೆದುಕೊಂಡು ಅದರಲ್ಲಿ ಮನೆ ಕಟ್ಟಿಸುತ್ತಿದ್ದರು. ಈ ಮನೆಯನ್ನು ಎರಡನೇ ಹೆಂಡತಿ ಸವಿತ ಅವರಿಗೆ ದಾನಪತ್ರ ಮಾಡಿದ್ದರು. ಈ ಎಲ್ಲ ವಿಚಾರ ತಿಳಿದು ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್ ತಂದೆ ಮರ್ಡರ್ ಮಾಡಿಸಲು ತೀರ್ಮಾನ ಮಾಡುತ್ತಾರೆ. ಇದಕ್ಕೆ ಬೋಗಿ ಗ್ರಾಮದ ಮೂವರು ಸಹಾಯವನ್ನು ಪಡೆದುಕೊಂಡಿರುತ್ತಾರೆ.
5 ಲಕ್ಷಕ್ಕೆ ಸುಪಾರಿ, ಎರಡನೇ ಪ್ರಯತ್ನದಲ್ಲಿ ಮರ್ಡರ್: ನಾಗೇಂದ್ರಪ್ಪನನ್ನು ಕೊಲ್ಲಲು ಮಂಜುನಾಥ್ ಹಾಗೂ ಉಮೇಶ್ ಬೋಗಿ ಗ್ರಾಮದ ಮೂವರಿಗೆ 5 ಲಕ್ಷಕ್ಕೆ ಸುಪಾರಿ ನೀಡಿರುತ್ತಾರೆ. ಕೊಲೆ ಕೊಲೆಯಾಗಿರದೆ, ಅದು ಒಂದು ಅಪಘಾತವಾಗಿರಬೇಕೆಂದು ತಿಳಿಸಿರುತ್ತಾರೆ. ಅದಕ್ಕೆ ನವೆಂಬರ್ 9 ರಂದು ಸುಪಾರಿ ಪಡೆದ ಮೂವರು KA 31 A 3025 ಗೂಡ್ಸ್ ವಾಹನದಲ್ಲಿ ನಾಗೇಂದ್ರಪ್ಪನಿಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನ ಮಾಡುತ್ತಾರೆ. ಆದರೆ, ಈ ಅಪಘಾತದಲ್ಲಿ ನಾಗೇಂದ್ರಪ್ಪ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುತ್ತಾರೆ.
ನಂತರ ಅದೇ ಮೂವರ ತಂಡ ನವೆಂಬರ್ 29 ರಂದು ನಾಗೇಂದ್ರಪ್ಪನನ್ನು KA 25 D 4245 ನ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಕರೆದು ಕೊಂಡು ಹೋಗಿ ಬಲವಂತವಾಗಿ ವಿಷ ಕುಡಿಸಿ, ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಬೋಗಿ ಗ್ರಾಮದ ಚರಂಡಿಯಲ್ಲಿ ಹಾಕಿ ಹೋಗಿರುತ್ತಾರೆ. ತನಿಖೆಯಲ್ಲಿ ನಾಗೇಂದ್ರಪ್ಪನದು ಕೊಲೆ ಎಂದು ತಿಳಿದು ಬಂದಿದ್ದು, ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಓದಿ: ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ: ಓರ್ವ ಸಾವು, ನಾಲ್ವರಿಗೆ ಗಾಯ