ಶಿವಮೊಗ್ಗ : ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಉತ್ಪನ್ನಗಳ ಮಾರಾಟ ಸ್ಟಾಲ್ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.
ಜಿಲ್ಲೆಯ ಕಾಚಿನಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೇಷ್ಮೆ ಬೆಳೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಹಾಗೂ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೈತರಿಗೆ ಸನ್ಮಾನಿಸುವ ಕಾರ್ಯಕ್ರಮ ಸೇರಿ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಅಧಿಕಾರಿಗಳಿಗೆ ಗೌರವಿಸುವ ಕೆಲಸವನ್ನು ರೇಷ್ಮೆ ಇಲಾಖೆ ಇನ್ನುಮುಂದೆ ಮಾಡಲಿದೆ. ರೇಷ್ಮೆ ಉತ್ಪನ್ನಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿ ಪ್ರತಿ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಉತ್ಪನ್ನಗಳ ಮಾರಾಟ ಸ್ಟಾಲ್ ಅನ್ನು ಸ್ಥಾಪಿಸುವ ಚಿಂತನೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಶಿವಮೊಗ್ಗದಲ್ಲಿಯೂ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಗುರಿ ಇದೆ. ಜೊತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾಲ್ ರೂಂ ಹಾಗೂ ರೈತರಿಗೆ ರೇಷ್ಮೆ ಮಾರಾಟ ಮಾಡಲು ರಾಮನಗರಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ಮಾರ್ಗಮಧ್ಯದಲ್ಲಿ ಕಿರುಕುಳ ನೀಡುತ್ತಾರೆ ಎಂದು ರೈತರು ನೀಡಿದ ದೂರಿನ ಮೇರೆಗೆ ರೈತರು ರೇಷ್ಮೆ ಮಾರಾಟ ಮಾಡಲು ಪಾಸ್ ವಿತರಣೆ ಮಾಡಲಾಗುವುದು ಎಂದರು.
ರಾಮನಗರದಲ್ಲಿ ಒಂದು ಅತ್ಯುತ್ತಮ ರೈತ ಸ್ನೇಹಿಯಾದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ಯೋಜಿಸಲಾಗಿದೆ. ಇದರಿಂದಾಗಿ ರಾಜ್ಯದ ಎಲ್ಲ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ. ನಾನು ಸಹ ರೈತನ ಮಗನೇ, ನಾವು ಸಹ ರೇಷ್ಮೆ ಬೆಳೆಯುತ್ತೇವೆ. ಹಾಗಾಗಿ, ನನಗೂ ರೇಷ್ಮೆ ಬೆಳೆಗಾರರ ಸಮಸ್ಯೆಗಳು ತಿಳಿದಿವೆ ಎಂದರು.