ಶಿವಮೊಗ್ಗ : ಕೊರೊನಾ ವಿಚಾರದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕೆ ಹೊರತು, ಆರೋಪ ಮಾಡುವುದರಲ್ಲಿಯೇ ಕಾಲ ಕಳೆಯಬಾರದು ಎಂದು ಸಿದ್ದರಾಮಯ್ಯನವರಿಗೆ ಸಚಿವ ಈಶ್ಚರಪ್ಪ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸಿದ್ದರಾಮಯ್ಯನವರು ಸರ್ಕಾರ ಕೊರೊನಾ ಕಿಟ್ ಖರೀದಿಯಲ್ಲಿ ಹಗರಣ ನಡೆಸಿದೆ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯನವರು ಸಹ ಸಿಎಂ ಆಗಿದ್ದವರು. ಕೊರೊನಾದ ವಿಚಾರದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಈಗ ಸಿದ್ದರಾಮಯ್ಯನವರು ತಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದರು.
ಕೊರೊನಾ ಹಾವಳಿ ದಿನೇದಿನೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ತಡೆಯಲು ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಅದನ್ನು ಶಿವಮೊಗ್ಗದಲ್ಲೂ ಸಹ ಜಾರಿ ಮಾಡಲಾಗುತ್ತಿದೆ. ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ರೋಗ ಹರಡುತ್ತಿದೆ. ಈ ನಿಟ್ಟಿನಲ್ಲಿ ಜನರ ಸಹಕಾರ ಅತಿಮುಖ್ಯ ಎಂದರು.
ಆನ್‌ಲೈನ್ ಪಾಠದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕೆಲವರು ಆನ್‌ಲೈನ್ ಪಾಠ ಬೇಕು ಅಂದ್ರೆ, ಇನ್ನೂ ಕೆಲವರು ಬೇಡ ಎನ್ನುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದರು.