ಶಿವಮೊಗ್ಗ: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿ ಯುವ ಉದ್ಯಮಿಯೊಬ್ಬರು ಸಾವಿಗೀಡಾದ ಘಟನೆ ಇಂದು ಮುಂಜಾನೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರಿಗಿರುವ ಮನೆಯೊಂದರಲ್ಲಿ ನಡೆದಿದೆ. ಉದ್ಯಮಿ ಭೂಪಾಳಂ ಎಸ್.ಶರತ್ (39) ಮೃತಪಟ್ಟಿದ್ದಾರೆ. ಇವರ ಪುತ್ರ ಸಂಚಿತ್ (12) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಚಿತ್ ಅವರಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗನನ್ನು ರಕ್ಷಿಸಲು ಹೋಗಿ ತಂದೆ ಸಾವು: ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಎದುರಿನ ಪ್ರತಿಷ್ಠಿತ ಭೂಪಾಳಂ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯೊಂದಿಗೆ ದಟ್ಟ ಹೊಗೆ ಆವರಿಸಿಕೊಂಡಿದೆ. ಮನೆಯೊಳಗಿದ್ದ ಭೂಪಾಳಂ ಶಶಿಧರ್ ಸೇರಿದಂತೆ ನಾಲ್ವರು ಹೊರಬಂದಿದ್ದರು. ಮಗನನ್ನು ರಕ್ಷಿಸಲು ಮತ್ತೆ ಮನೆಯೊಳಗೆ ತೆರಳಿದ್ದ ಶರತ್ ಹೊಗೆಯ ಮಧ್ಯೆ ಸಿಲುಕಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಜತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ತೀವ್ರವಾಗಿ ಅಸ್ವಸ್ಥರಾಗಿ ಬಿದ್ದಿದ್ದ ಶರತ್ ಮತ್ತು ಅವರ ಮಗನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರತ್ ಇಂದು ಬೆಳಿಗ್ಗೆ ಮೃತಪಟ್ಟಿದ್ದು, ಅವರ ಪುತ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ: ಶರತ್ ಎಂಬುವರ ಮನೆಯಲ್ಲಿ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ನಿಂದ ಮನೆಯ ಸ್ಟೆಬಲೈಜರ್ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಬೆಡ್ ರೂಂನಲ್ಲಿ ದಟ್ಟ ಹೊಗೆ ಆವರಿಸಿದೆ. ನಂತರ ಬೆಂಕಿ ಕಾಣಿಸಿಕೊಂಡ ಕಾರಣ ಮಕ್ಕಳನ್ನು ಹಾಗೂ ಪತ್ನಿಯನ್ನು ಹೊರಗೆ ಕಳುಹಿಸಿದ್ದರು. ಆ ಬಳಿಕ ಶರತ್ ಅಸ್ವಸ್ಥರಾಗಿ ಬಿದ್ದಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಬೆಂಕಿಯಿಂದ ಹೊತ್ತಿ ಉರಿದ ಕಾರು, ಮಾಲೀಕನ ಪತ್ತೆಗೆ ಪೊಲೀಸರ ಹುಡುಕಾಟ
ಇತ್ತೀಚೆಗೆ ನಗರದಲ್ಲಿ ಹೊತ್ತಿ ಉರಿದಿತ್ತು ಕಾರು: ರಾತ್ರಿ ವೇಳೆ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ರಸ್ತೆ ಪಕ್ಕ ನಿಂತಿದ್ದ ಕಾರು ಬೆಂಕಿಗೆ ಆಹುತಿಯಾಗಿತ್ತು. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಅವಘಡ ನಡೆದಿದೆ ಎನ್ನಲಾಗಿದೆ. ಕಾರು ಯಾರದ್ದೆಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.