ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಏರಿಕೆಯಾಗಿದೆ.
ಹೌದು, ಕಳೆದ ಐದು ದಿನಗಳಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 55 ಕ್ಕೆ ಏರಿಕೆ ಆಗಿದ್ದು, ಮಲೆನಾಡಿನ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಕಳೆದ ಐದು ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ:
ಮೇ 1 ರಂದು ಕೋವಿಡ್ ಸೋಂಕಿನಿಂದ 6 ಜನ ಸಾವನ್ನಪ್ಪಿದ್ದಾರೆ. ಮೇ 2 ರಂದು 12, ಮೇ 3 ರಂದು 7, ಮೇ 4 ರಂದು 15, ಮೇ 5 ರಂದು 15 ಜನ ಕೊರೊನಾದಿಂದ ಸಾವನ್ನಪ್ಪುವ ಮೂಲಕ ಕೇವಲ ಐದೇ ದಿನಗಳಲ್ಲಿ 55 ಜನ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಐದು ದಿನಗಳಲ್ಲಿ ಹೆಚ್ಚಾದ ಸೋಂಕಿತರ ಸಂಖ್ಯೆ ನೋಡುವುದಾದರೇ, ಮೇ 1 ರಂದು 657, ಮೇ- 2 ರಂದು 765, ಮೇ -3 ಕ್ಕೆ 791, ಮೇ- 04 ಕ್ಕೆ 612 , ಮೇ -05 ಕ್ಕೆ 709 ಜನರಿಗೆ ಕೊರೊನಾ ಕಾಣಿಸಿಕೊಳ್ಳುವ ಮೂಲಕ ಕೇವಲ ಐದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,531 ಆಗಿದೆ.
ಕೊರೊನಾದಿಂದ ಗುಣಮುಖರಾಗಿ ಮನೆಗೆ ಹೋಗುತ್ತಿರುವರ ಸಂಖ್ಯೆ:
ಮೇ 1 ರಂದು ಕೊರೊನಾದಿಂದ ಗುಣಮುಖರಾಗಿ 610 ಜನ ಮನೆಗೆ ಹೋಗಿದ್ದಾರೆ. ಮೇ 02 ಕ್ಕೆ 422, ಮೇ 3ಕ್ಕೆ 422, ಮೇ 4ಕ್ಕೆ 642, ಮೇ 5ಕ್ಕೆ 209 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಐದು ದಿನಗಳಲ್ಲಿ 2,305 ಜನ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿರುವುದು ಸಮಾಧಾನಕರ ಸಂಗತಿ.
ಕೊರೊನಾ ಸೋಂಕು, ಸಾವು ಹೆಚ್ಚುತ್ತಿದ್ದರು ಬುದ್ದಿ ಕಲಿಯದ ಜನ
ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಸಾವಿನ ಪ್ರಮಾಣವು ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅನಗತ್ಯವಾಗಿ ಓಡಾಡುತ್ತಿರುವುದರ ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲಿಸದೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ.