ಶಿವಮೊಗ್ಗ: ಹುಣಸೆ ಮರದ ಕಸದ ವಿಚಾರವಾಗಿ ಪಕ್ಕದ ಮನೆಯ ವ್ಯಕ್ತಿಯನ್ನು ಮಚ್ಚಿನಿಂದ ಕೊಲೆಗೈದ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿವಮೊಗ್ಗ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತು.
2017ರಲ್ಲಿ ಶಿಕಾರಿಪುರ ಪಟ್ಟಣದ ಚೌರಡೇರಕೇರಿಯಲ್ಲಿ ಗೋಣಿ ಮೂರ್ತಪ್ಪ(46) ಎಂಬವರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಶಿಕ್ಷೆ ಪ್ರಕಟಿಸಿದರು. ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವಿನಾಶ ಅಲಿಯಾಸ್ ಅವಿ(25), ಪ್ರಶಾಂತ್ ಅಲಿಯಾಸ್ ಗುಂಡ(26), ಪ್ರದೀಪ್ (28) ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 90 ಸಾವಿರ ರೂ ದಂಡ ವಿಧಿಸಿದೆ. ಗೌತಮ್ ಅಲಿಯಾಸ್ ಗುತ್ಯಪ್ಪಗೆ (28) 80 ಸಾವಿರ ರೂ ದಂಡ ವಿಧಿಸಲಾಗಿದೆ.
ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇರೆಗೆ ಅಕ್ಷಯ್(24) ವಿರುದ್ದ ಕಲಂ 201 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟಿದ್ದು 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಲಾಗಿದೆ. ಹಣ ಕಟ್ಟಲು ವಿಫಲನಾದರೆ, 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಜಾರಿಯಾಗಲಿದೆ.
ಚೌರಡೇರಕೇರಿಯಲ್ಲಿ ಗೋಣಿ ಮೂರ್ತಪ್ಪ(46) ಎಂಬವರನ್ನು ಪಕ್ಕದ ಮನೆಯವರಾದ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ಸೇರಿಕೊಂಡು ಮಚ್ಚಿನಿಂದ ಹತ್ಯೆಗೈದಿದ್ದರು. ಮೂರ್ತಪ್ಪನ ಪತ್ನಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಶಿಕಾರಿಪುರ ಸಿಪಿಐ ಹರೀಶ್ ಪಟೇಲ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಹೇಮಂತ್ ಕುಮಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಾಜಿ ಶಿಕ್ಷಣ ಸಚಿವರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ₹50 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ!