ಶಿವಮೊಗ್ಗ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಜಗಳವಾಡಿ, ವ್ಯಕ್ತಿಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಅಪರಾಧಿಗೆ ಶಿವಮೊಗ್ಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಪರಶುರಾಮ ಶಿಕ್ಷೆಗೊಳಗಾದ ವ್ಯಕ್ತಿ.
2022ರ ಮಾರ್ಚ್‌ನಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಸಮೀಪದ ಅಶೋಕ ವೃತ್ತದಲ್ಲಿ ಅಪರಾಧಿ ಪರಶುರಾಮ ಎಂಬಾತ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದನು. ಇಬ್ಬರ ನಡುವೆ ಹಳೆ ವೈಷಮ್ಯ ಇತ್ತು. ಇದೇ ಕಾರಣಕ್ಕೆ ಇಬ್ಬರ ಜಗಳ ನಡೆದಿತ್ತು. ಈ ವೇಳೆ ಪರಶುರಾಮ ಚಂದ್ರಶೇಖರನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದಾನೆ. ಇದರಿಂದ ಚಂದ್ರಶೇಖರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.
ಚಂದ್ರಶೇಖರ್ ಸಹೋದರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ದೊಡ್ಡಪೇಟೆಯ ಪಿಐ ಹರೀಶ್ ಪಟೇಲ್ ಅವರು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ ಆಲಿಸಿದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಅವರು ಪರಶುರಾಮನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ಪುಷ್ಪಾ ವಾದ ಮಂಡಿಸಿದ್ದರು.
ಇದನ್ನೂ ಓದಿ: ವಿವಾಹೇತರ ಸಂಬಂಧ : ಇಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್