ಶಿವಮೊಗ್ಗ: ರಾಜ್ಯದಲ್ಲಿನ ಜಿದ್ದಾಜಿದ್ದಿ ಕಣಗಳಲ್ಲಿ ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರವೂ ಒಂದಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಪೈಪೋಟಿ ನಡೆಯುತ್ತದೆ. 9 ಬಾರಿ ಕಾಂಗ್ರೆಸ್ ಇಲ್ಲಿ ಗೆದ್ದರೆ, ಐದು ಬಾರಿ ಕಮಲ ಅರಳಿದೆ. ಬೇರಾವುದೇ ಪಕ್ಷ ಇಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಕ್ಷೇತ್ರ ರಾಜ್ಯದ ಶಕ್ತಿ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಶಿವಮೊಗ್ಗ ನಗರ ವಿಧಾನಸಭ ಕ್ಷೇತ್ರ ಪೂರ್ಣ ನಗರ ಪ್ರದೇಶವನ್ನೇ ಹೊಂದಿದೆ. ಈ ಹಿಂದೆ ಕೆಲ ಗ್ರಾಮೀಣ ಪ್ರದೇಶಗಳೂ ಸೇರಿಕೊಂಡಿದ್ದವು. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ನಗರ ಪ್ರದೇಶವಕ್ಕೆ ಮಾತ್ರ ಸೀಮಿತವಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಷ್ಟೆ ಈ ಕ್ಷೇತ್ರದಲ್ಲಿವೆ. ಇನ್ನೂ ಕ್ಷೇತ್ರದ ಪಕ್ಷಗಳ ಸ್ಥಿತಿಗತಿಗಳ ಕುರಿತ ಕಿರುನೋಟ ನೋಟ ಇಲ್ಲಿದೆ.
ಬಿಜೆಪಿ ಪ್ರಾಬಲ್ಯ ಮುಂದುವರಿಕೆ: ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಪ್ರಾಬಲ್ಯ ಸಾಧಿಸುತ್ತಿದೆ. 1983 ರಿಂದ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸ್ಪರ್ಧೆ ಮಾಡುತ್ತಿದ್ದು, ಇಲ್ಲಿ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಆನಂದ್ ರಾವ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಬಿಜೆಪಿಯಿಂದ ಹೆಚ್ಚು ಬಾರಿ ಸ್ಪರ್ಧೆ ಮಾಡಿರುವುದು ಹಾಗೂ ಹೆಚ್ಚು ಸಾರಿ ಗೆಲುವು ಸಾಧಿಸಿರುವುದು ಈಶ್ವರಪ್ಪನವರು ಎಂಬುದು ವಿಶೇಷ.
ಈ ಬಾರಿ ಈಶ್ವರಪ್ಪನವರಿಗೆ ಸಾಕಷ್ಟು ನಾಯಕರು ಟಕ್ಕರ್ ನೀಡಲು ಸಿದ್ದರಾಗಿದ್ದಾರೆ. ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ದತ್ತಾತ್ರಿ, ಧನಂಜಯ ಸರ್ಜಿ, ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್ ಸೇರಿದಂತೆ ಹಲವು ನಾಯಕರು ಸ್ಪರ್ಧೆಯಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ನಾನೂ ಸಹ ಆಕಾಂಕ್ಷಿ ಎಂಬ ಫ್ಲೆಕ್ಸ್ ನಗರದೆಲ್ಲೆಡೆ ರಾರಾಜಿಸಿತ್ತು. ಇದಲ್ಲದೇ ಅವರೂ ಕೂಡ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದರು.
ಇನ್ನು ಹಾಲಿ ಶಾಸಕ ಈಶ್ವರಪ್ಪನವರಿಗೆ ವಯೋಕಾರಣಕ್ಕಾಗಿ ಟಿಕೆಟ್ ಸಿಗಲಿದೆಯಾ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೂ, ಈಶ್ವರಪ್ಪ ಅವರು ತಾವೇ ಆಕಾಂಕ್ಷಿ ಎಂದು ನೇರವಾಗಿ ಹೇಳದಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಕ್ಷೇತ್ರ: ಈಶ್ವರಪ್ಪ ಅವರು ಪ್ರವರ್ಧಮಾನಕ್ಕೆ ಬರುವ ಮೊದಲು ಕಾಂಗ್ರೆಸ್ ಈ ಕ್ಷೇತ್ರವನ್ನು ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಇಲ್ಲಿ ಪಕ್ಷ 9 ಬಾರಿ ಗೆಲುವು ಸಾಧಿಸಿದೆ. ಬಿಜೆಪಿ ಸಂಘಟನೆಯ ಬಳಿಕ ಪಕ್ಷ ಖದರ್ ಕಳೆದುಕೊಂಡಿದೆ. ಆದರೂ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿಗೇನು ಕಡಿಮೆ ಇಲ್ಲ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ನಗರಸಭ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ್, ಎಸ್.ಕೆ.ಮರಿಯಪ್ಪ ಸ್ಪರ್ಧಾಕಾಂಕ್ಷೆ ಹೊಂದಿದ್ದಾರೆ.
ಇವರೆಲ್ಲರೂ ಪಕ್ಷದ ಸೂಚನೆಯಂತೆ ತಲಾ 2 ಲಕ್ಷ ರೂಪಾಯಿ ನೀಡಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಕಾಂಕ್ಷಿಗಳಿಂದ ಅರ್ಜಿ ಹಾಕಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಈಗಾಗಲೇ ಪಕ್ಷ ಘೋಷಣೆ ಮಾಡಿರುವ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಮನೆ ಯಜಮಾನಿಗೆ 2000 ರೂ. ಖಚಿತ ಎಂಬ ಘೋಷಣೆಯೊಂದಿಗೆ ತಮ್ಮ ತಮ್ಮ ಭಾವಚಿತ್ರದ ಫ್ಲೆಕ್ಸ್ ಹಾಕಿಕೊಂಡು ಪ್ರಚಾರ ಪ್ರಾರಂಭಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಆಕಾಂಕ್ಷಿಗಳು ಹೇಳಿದ್ದರೂ ಗುಂಪುಗಾರಿಕೆ ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಲೆನಾಡ ಹೆಬ್ಬಾಗಿಲಲ್ಲಿ ಜೆಡಿಎಸ್ಗಿಲ್ಲ ವರ್ಚಸ್ಸು: ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲದಾಗಿದೆ. ಹೀಗಾಗಿ ಪಕ್ಷದಿಂದ ಇದುವರೆಗೂ ಯಾರೂ ಸಹ ಸ್ಪರ್ಧೆ ಮಾಡುವ ಕುರಿತು ನಿರ್ಧಾರವಾಗಿಲ್ಲ. ಬಹಿರಂಗವಾಗಿ ಹಾಗೂ ಪಕ್ಷದ ಆಂತರಿಕ ವಲಯದಲ್ಲಿ ಯಾರು ಸಹ ಚರ್ಚೆ ನಡೆಸಿಲ್ಲ. ಜೆಡಿಎಸ್‌ನಿಂದ ನಡೆದ ಪಂಚರತ್ನ ಯಾತ್ರೆಯು ಶಿವಮೊಗ್ಗ ನಗರ ಕ್ಷೇತ್ರಕ್ಕೆ ಬರಲಿಲ್ಲ. ಅಲ್ಲದೇ ಕುಮಾರಸ್ವಾಮಿ ಅವರು ನಾನು ಗೆಲ್ಲುವ ಕ್ಷೇತ್ರದ ಕಡೆ ಹೆಚ್ಚಿನ ಆಸಕ್ತಿ ವಹಿಸಿದ್ದೇನೆ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನವನ್ನು ಹೊಂದಿಲ್ಲ. ಅಲ್ಲದೆ ಪಕ್ಷಕ್ಕೆ ಹಿರಿಯ ನಾಯಕರಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ನಿರಂಜನ್ ಅವರು ಸ್ಪರ್ಧೆ ಮಾಡಿ ಸೋತವರು ಮತ್ತೆ ಕ್ಷೇತ್ರದ ಕಡೆ ಮುಖ ಮಾಡಿಲ್ಲ. ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್ನ ರಾಜ್ಯ ಕಾರ್ಯದರ್ಶಿ ಎಂ.ಶ್ರೀಕಾಂತ್ ಅವರು ಸ್ಪರ್ಧೆ ಮಾಡಿದ್ದರು. 22 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಆದರೆ, ಈ ಬಾರಿ ಸ್ಪರ್ಧೆ ಮಾಡಲು ಆಸಕ್ತಿಯನ್ನು ತೋರದ ಕಾರಣ ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡ್ತಾರೆ ಎಂಬುದು ದೃಢಪಟ್ಟಿಲ್ಲ.
ಇದಲ್ಲದೇ, ಆಮ್ ಆದ್ಮಿ ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನೇತ್ರಾವತಿ, ಕಿರಣ್, ಮಾಜಿ ಮೇಯರ್ ಎಳುಮಲೈ, ಮನೋಹರ್ ಸೇರಿದಂತೆ ಇತರರು ಕಣಕ್ಕಿಳಿಯುವ ಸಾಧ್ಯತೆ ಇದೆ. ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕೂಡ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಕಳೆದ ವರ್ಷ ಪಕ್ಷಗಳು ಪಡೆದ ಮತಗಳ ವಿವರ: ಬಿಜೆಪಿಯ ಈಶ್ವರಪ್ಪ 1,04,027 ಮತಗಳು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ನ ಕೆ.ಬಿ.ಪ್ರಸನ್ನ ಕುಮಾರ್ 57,920 ಮತ, ಜೆಡಿಎಸ್ನ ನಿರಂಜನ್ ಅವರು 5,796 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಟಿಕೆಟ್ಗಾಗಿ ಕನಿಷ್ಠ 5 ಜನ ಆಕಾಂಕ್ಷಿಗಳಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭಿವೃದ್ದಿ ವಿಷಯದ ಮೇಲೆ ಚುನಾವಣೆ ನಡೆಯುತ್ತದೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಿಂದೂ ಹಾಗೂ ಹಿಂದೂಯೇತರ ಎಂಬ ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ.
ಓದಿ: ಒತ್ತಡ ಬಂದರೂ, ವಿಧಾನಸಭೆಗೆ ಸ್ಪರ್ಧೆ ವಿಚಾರ ಮತದಾರರ ಜತೆ ಚರ್ಚಿಸಿಯೇ ತೀರ್ಮಾನ: ಡಿ. ಕೆ. ಸುರೇಶ್