ಶಿವಮೊಗ್ಗ: ಇಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಪೂರಕ ವಾತಾವರಣ ನಿರ್ಮಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ನಗರದ ಎನ್‍ಇಎಸ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಳಿಗೆ 220 ಕೋಟಿ ರೂ. ಮಂಜೂರು ಮಾಡಲಾಗಿದೆ. ಮುಂದಿನ 15 ದಿನಗಳ ಒಳಗಾಗಿ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, 8ರಿಂದ 10 ತಿಂಗಳ ಒಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ವಿಮಾನ ನಿಲ್ದಾಣದಿಂದಾಗಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಬೇರೆ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಜಮೀನು, ಹಣಕಾಸು ನೆರವು ಸೇರಿದಂತೆ ಎಲ್ಲಾ ಉತ್ತೇಜನ ನೀಡಲಾಗುವುದು. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸುವ ಕುರಿತಾಗಿ ಈಗಾಗಲೇ 42 ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದೇನೆ. ಕೃಷಿ ಮತ್ತು ಕೈಗಾರಿಕೆ ಸರಿ ಸಮಾನವಾಗಿ ಬೆಳೆಯದೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸರ್ಕಾರ ಬ್ಯಾಂಕ್‍ಗಳಿಂದ ಹಣಕಾಸು ನೆರವು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸರಳೀಕೃತ ಪರವಾನಗಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇತರರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುವಂತೆ ಯುವ ಜನತೆ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು.
ನಿರಂತರ ಉದ್ಯೋಗ ಮೇಳ ಆಯೋಜನೆ: 2009ರಲ್ಲಿ ರಾಜ್ಯದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಯುವ ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಯಕ್ರಮ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸಲಾಗುವುದು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು, ಸ್ಥಳದಲ್ಲಿಯೇ ಉದ್ಯೋಗ ಪಡೆದುಕೊಳ್ಳುವ ಉತ್ತಮ ಅವಕಾಶವಾಗಿದೆ. ಜಿಲ್ಲೆಯಲ್ಲಿ 45 ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗಿದ್ದು, 2651 ಮಂದಿ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ನಡೆದ ಉದ್ಯೋಗ ಮೇಳಗಳಲ್ಲಿ ಒಟ್ಟು 11,500 ಮಂದಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ.
ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ 3609 ಮಂದಿಗೆ ಪೂರ್ಣ ತರಬೇತಿ ನೀಡಲಾಗಿದ್ದು, 2600 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.