ಶಿವಮೊಗ್ಗ : ರೈಲ್ವೆ ಮಾರ್ಗದ ಅಲ್ಪ ಪರಿಹಾರದಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರೋಗೊಪ್ಪದ ರೈತ ಅರುಣ್ ನಾಯ್ಕ (35) ಎಂಬುವರು ಆತ್ಮಹತ್ಯೆ ಮಾಡಿಕೊಂಡ ರೈತ. ಅರುಣ್ ನಾಯ್ಕ ಅವರ ಅಡಿಕೆ ತೋಟದ ನಡುವೆಯೇ ಶಿವಮೊಗ್ಗದಿಂದ ಶಿಕಾರಿಪುರದ ಮೂಲಕ ರಾಣೆಬೆನ್ನೂರು ತಲುಪುವ ರೈಲ್ವೆ ಮಾರ್ಗ ಸಾಗುತ್ತದೆ. ಈ ಕುರಿತು ಸರ್ವೆ ನಡೆಸಲಾಗುತ್ತಿದೆ.
ಈಗಾಗಲೇ ಪ್ರಾಥಮಿಕ ಹಂತದ ಸರ್ವೆ ಕಾರ್ಯ ಮುಗಿದಿದೆ. ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಪರಿಹಾರ ನೀಡುವ ಕಾರ್ಯವನ್ನು ಮುಂದುವರೆಸಿದೆ. ಇದರಲ್ಲಿ ಅಲ್ಪ ಪರಿಹಾರ ಸಿಗುತ್ತದೆ ಎಂದು ನೊಂದ ಅರುಣ್, ಶುಕ್ರವಾರ ತಮ್ಮ ಅಡಿಕೆ ತೋಟದಲ್ಲಿಯೇ ವಿಷ ಸೇವನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಿಕಾರಿಪುರ ತಾಲೂಕು ಎಳೆನೀರು ಕೊಪ್ಪ ಗ್ರಾಮದಲ್ಲಿ ಅರುಣ್ ನಾಯ್ಕ ಅವರ ತಂದೆ ತಿಮ್ಮಾ ನಾಯ್ಕ ಹೆಸರಿನಲ್ಲಿರುವ ಸರ್ವೇ ನಂಬರ್ 13/13 ಹಾಗೂ 14/13ರಲ್ಲಿ ಅರುಣ್ ನಾಯ್ಕ್ಗೆ ಸೇರಿದ ಮೂರು ಎಕರೆ ಭೂಮಿ ಇದೆ.
ಈ ಭೂಮಿಯಲ್ಲಿ ಅಡಿಕೆಯನ್ನು ಬೆಳೆಯಲಾಗಿದೆ. ಅಡಿಕೆಯು ಫಸಲು ನೀಡುತ್ತಿದೆ. ಈಗ ರೈಲು ಮಾರ್ಗಕ್ಕಾಗಿ ಬೆಳೆದುನಿಂತ ಅಡಿಕೆ ತೋಟವನ್ನು ವಶಪಡಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಧರಣಿ ಮಾಡ್ತಿದ್ದಾರೆ : ಹೆಚ್ಡಿಕೆ
ಎಕರೆಗೆ ₹5 ಲಕ್ಷ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಕಾಮಗಾರಿ ನಡೆಸುತ್ತಿರುವ ವೇಳೆ ವಿರೋಧ ವ್ಯಕ್ತಪಡಿಸಿದ ಅರುಣ್ ನಾಯ್ಕ, ಎಕರೆಗೆ 5 ಲಕ್ಷ ರೂ. ಪರಿಹಾರ ಎಂದರೆ ಅನ್ಯಾಯವಾಗುತ್ತದೆ.
ಪ್ರಸ್ತುತ ಮೂವತ್ತರಿಂದ ನಲವತ್ತು ಲಕ್ಷ ರೂ. ಎಕರೆ ಇರುವ ಅಡಕೆ ತೋಟಕ್ಕೆ ಕೇವಲ 5 ಲಕ್ಷ ರೂ. ಪರಿಹಾರ ಎಂದರೆ ರೈತರ ಜೀವನ ಮಣ್ಣು ಸೇರಿದಂತೆ ಎಂದು ಅಧಿಕಾರಿಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದರು.
ಅಧಿಕಾರಿಗಳಿಂದ ನಿರೀಕ್ಷಿತ ಉತ್ತರ ದೊರೆಯದ ಕಾರಣ ಮನನೊಂದು ತನ್ನದೇ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಮೃತರು ತಂದೆ ಹಾಗೂ ತಾಯಿ, ಒಬ್ಬ ತಮ್ಮ ಹಾಗೂ ಇಬ್ಬರು ತಂಗಿಯರು ಮತ್ತು ಹೆಂಡತಿ, ಚಿಕ್ಕವಯಸ್ಸಿನ 1 ಗಂಡು,1 ಹೆಣ್ಣು ಮಗುವನ್ನು ಬಿಟ್ಟು ಅಗಲಿದ್ದಾರೆ. ಈಗ ಶಿಕಾರಿಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.