ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ 65 ನೇ ವರ್ಷದ ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಂಡ ಸಂಸದ ಬಿ.ವೈ.ರಾಘವೇಂದ್ರ ಆನೆ ಬಿಡಾರದ ಹೊಸ ಲೋಗೋವನ್ನು ಬಿಡುಗಡೆ ಮಾಡಿದರು.
ಇದರಿಂದ ಸಕ್ರೆಬೈಲಿಗೆ ಇಂದಿನಿಂದ ಅಧಿಕೃತ ಲೋಗೋ ಸಿಕ್ಕಂತೆ ಆಗಿದೆ. ಆನೆ ಬಿಡಾರದಲ್ಲಿ ವನ್ಯಜೀವಿ ಸಪ್ತಾಹದ ಹಿನ್ನಲೆಯಲ್ಲಿ ಗಿಡ ನೆಡುವ ಹಾಗೂ ಆನೆ ಕಾರಿಡಾರ್ನ್ನು ಸ್ವಚ್ಛ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸಂಸದರು ಲೋಗೋ ಬಿಡುಗಡೆ ಮಾಡಿದ ನಂತ್ರ ಆವರಣದಲ್ಲಿ ವಿದ್ಯಾರ್ಥಿಗಳೂಂದಿಗೆ ಗಿಡ ನೆಟ್ಟರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರದ ಒಂದು ಕಡೆ ಹುಲಿ,ಸಿಂಹಧಾಮ ಹಾಗೂ ಇನ್ನೂಂದು ಕಡೆ ಆನೆ ಬಿಡಾರವಿದೆ. ಇವೆರಡನ್ನು ನಾಗರಹೊಳೆ, ಬಂಡಿಪುರದಂತೆ ಅಭಿವೃದ್ದಿ ಮಾಡಬಹುದಾಗಿದೆ. ಇದಕ್ಕೆ ಬೇಕಾದ ನೀಲ ನಕ್ಷೆಯನ್ನು ಅರಣ್ಯಾಧಿಕಾರಿಗಳು ಮಾಡಿ ಕೊಟ್ಟರೆ ಯೋಜನೆಯನ್ನು ಸರ್ಕಾರದ ಮುಂದಿಟ್ಟು ಅಭಿವೃದ್ದಿ ಮಾಡಿಸಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ನಡೆಯದ ಆನೆ ಕ್ರೀಡಾಕೂಟ: ಪ್ರತಿ ವರ್ಷದ ವನ್ಯಜೀವಿ ಸಪ್ತಾಹದ ಹಿನ್ನಲೆಯಲ್ಲಿ ಜನಾಕರ್ಷಣೆಗಾಗಿ ಆನೆಗಳ ಕ್ರೀಡಾಕೂಟ ನಡೆಸಲಾಗುತ್ತಿತ್ತು. ಆನೆಗಳಿಗೆ ಟ್ರೈನಿಂಗ್ ನೀಡಿ ಅವುಗಳಿಂದ ಕ್ರಿಕೆಟ್, ಪುಟ್ಬಾಲ್, ರನ್ನಿಂಗ್ ರೇಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಆದರೆ ಕ್ರೀಡಾ ಕೂಟದ ನೆಪದಲ್ಲಿ ಆನೆಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಮಲೆನಾಡು ವನ್ಯಜೀವಿ ಮತ್ತು ಕಲ್ಚರಲ್ ಪ್ರತಿಷ್ಠಾನದವರು ಒತ್ತಡ ಹಾಕಿದ ಪರಿಣಾಮ ಆನೆಗಳ ಕ್ರೀಡಾ ಕೂಟಕ್ಕೆ ಬ್ರೇಕ್ ಹಾಕಲಾಗಿದೆ.