ಶಿವಮೊಗ್ಗ : ಶ್ರಾವಣ ಮಾಸದ ಕೊಡುಗೆಯಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚಿಸಿರುವುದಾಗಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ್ ರಾವ್ ತಿಳಿಸಿದ್ದಾರೆ.
ಮಾಚೇನಹಳ್ಳಿಯ ಶಿಮುಲ್ ಕಚೇರಿಯಲ್ಲಿ ಮಾತನಾಡಿದ ಅವರು, ಶಿಮುಲ್ ತನ್ನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತ ಬಂದಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಪ್ರಗತಿಯಾಗಿದೆ. ಆಗಸ್ಟ್ 11 ರಿಂದ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ಗೆ 1 ರೂ. ಹೆಚ್ಚಿಸಲಾಗುವುದು ಎಂದರು.
ಈ ರದ ಹೆಚ್ಚಳದ ಕುರಿತು ಇಂದು ನಡೆದ 421 ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ಪ್ರತಿ ಲೀಟರ್ ಹಾಲಿಗೆ (ಶೇ 4.0 ಎಸ್‌ಎನ್ಎಫ್ 8.50%) 29.02 ಆಗಿದ್ದು ಆಗಸ್ಡ್ 11 ರಿಂದ ನೀಡುವ ದರ ರೂ 30.06 ರೂ. ಆಗಲಿದೆ ಎಂದರು. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ನೀಡುತ್ತಿರುವ ದರ (ಶೇ 4.0 ಎಸ್ ಎನ್ ಎಫ್ 8.50 %) ಪ್ರತಿ ಲೀಟರ್ ಹಾಲಿನ ರೂ 27.16 ರೂ ಆಗಿದ್ದು, ಆಗಸ್ಟ್ 11 ರಿಂದ ನೀಡುವ ದರ ರೂ. 28.20 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಹಾಲಿನ ಮಾರಾಟವನ್ನು ಅಂತಾರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಯೋಜನೆಯಿದ್ದು, ದೆಹಲಿ ಮತ್ತು ಮಹಾರಾಷ್ಟ್ರಕ್ಕೆ 1 ಲಕ್ಷ ಲೀಟರ್ ಹಾಲು ಸರಬರಾಜು ಮಾಡುವ ಕುರಿತು ಆಗಸ್ಟ್ 12 ರಂದು ಸಭೆ ನಡೆಸಲಿದ್ದೇವೆ. ಒಕ್ಕೂಟದ ಅಭಿವೃದ್ಧಿಗಾಗಿ ಹಲವಾರು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿದ್ದೇ ಎಂದರು. ಈ ವೇಳೆ ಶಿಮುಲ್ ನಿರ್ದೇಶಕರು, ಪಶುಪಾಲನಾ ಉಪ ನಿರ್ದೆಶಕರು, ಶಿಮುಲ್ ಎಂ.ಡಿ ಬಸವರಾಜ್ ಹಾಜರಿದ್ದರು.
ಇದನ್ನೂ ಓದಿ : ಪರಪ್ಪನ ಅಗ್ರಹಾರಕ್ಕೆ ಕೊರಿಯರ್ ಪಾರ್ಸೆಲ್ ನಿಷೇಧ.. ಮುಖ್ಯ ಅಧೀಕ್ಷಕರಿಂದ ಹೊಸ ಗೈಡ್ ಲೈನ್ಸ್