ಶಿವಮೊಗ್ಗ: ನಗರದಲ್ಲಿ ಕಳೆದ ಸೋಮವಾರ ನಡೆದ ರೌಡಿ ಶೀಟರ್ ಮಂಜುನಾಥ್ ಭಂಡಾರಿ ಕೊಲೆಗೆ ಹಳೆ ದ್ವೇಷವೇ ಕಾರಣ ಇರಬಹುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಹೇಳಿದರು.
ಕಳೆದ ಸೋಮವಾರ ಮಧ್ಯಾಹ್ನ ಮಂಜುನಾಥ್ ಭಂಡಾರಿ ಎಂಬ ವ್ಯಕ್ತಿಯನ್ನು ನಗರದ ಬಸವನಗುಡಿ 5ನೇ ಕ್ರಾಸ್ ಬಳಿ ಬೈಕ್ನಲ್ಲಿ ಬಂದ ಮೂವರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು. ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು, ನಿನ್ನೆ ಮಧ್ಯಾಹ್ನ ಕೊಲೆಯಾದ ಮಂಜುನಾಥ್ ಭಂಡಾರಿ ರೌಡಿ ಶೀಟರ್ ಆಗಿದ್ದ, ಈತನ ವಿರುದ್ಧ 2016ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಕೊಲೆಗೆ ಈ ಹಳೆ ದ್ವೇಷವೇ ಕಾರಣ ಇರಬಹುದಾ, ಅಥವಾ ಕೊಲೆಯಾದ ಎರಡು ದಿನಗಳ ಹಿಂದೆ ಇಬ್ಬರು ವ್ಯಕ್ತಿಗಳೊಂದಿಗೆ ಜಗಳವಾಡಿದ್ದ ಎಂಬ ಮಾಹಿತಿ ಕೂಡ ಇದೆ. ಹಾಗಾಗಿ ಕೊಲೆಗೆ ಇದು ಸಹ ಕಾರಣ ಇರಬಹುದಾ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ತಿಳಿಸಿದರು.