ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯ 18 ನೇ ವಾರ್ಡ್ ವಿನೋಬನಗರದ ಪೃಥ್ವಿ ಮ್ಯಾನ್ಷನ್ ಎದುರಿನ ಶುಭ ಮಂಗಳ ಮಂಟಪಕ್ಕೆ ಹೋಗುವ ಮುಖ್ಯ ರಸ್ತೆಯ ಅವ್ಯವಸ್ಥೆಯ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ರಸ್ತೆ ಮಧ್ಯೆಯೇ ಕುರ್ಚಿ ಹಾಕಿ ಕುಳಿತು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಶುಭಮಂಗಳ ಮಂಟಪಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಜೊತೆಗೆ ಹಲವೆಡೆ ರಸ್ತೆ ಒತ್ತುವರಿಯಾಗಿದ್ದು, ಪಾದಚಾರಿಗಳ ಓಡಾಟಕ್ಕೆ ಫುಟ್ಪಾತ್ ಇಲ್ಲವಾಗಿದೆ. ಇದರಿಂದಾಗಿ ಜನ ಸಂಚಾರ ಮತ್ತು ವಾಹನ ಸಂಚಾರ ದುಸ್ತರವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸಮೀಪದಲ್ಲಿಯೇ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಅದು ಅಪೂರ್ಣವಾಗಿ ಸಮಸ್ಯೆ ತಂದೊಡ್ಡಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಈ ಸಮಸ್ಯೆಯ ಪರಿಹಾರಕ್ಕೆ ಪಾಲಿಕೆ ಮುಂದಾಗಿಲ್ಲ. ಇಂತೆಯೇ ನಿರ್ಲಕ್ಷ್ಯ ವಹಿಸಿದರೆ ಸೋಮವಾರವೂ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ನಿವಾಸಿಗಳು ಹೇಳಿದ್ದಾರೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಗಮಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಶರತ್, ಚಂದ್ರಶೇಖರ್, ಪುನೀತ್, ರಾಜೇಶ್, ಗಿರೀಶ್, ಶ್ರೀನಿವಾಸ್, ರಮೇಶ್, ರಾಮಣ್ಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಓದಿ : ಮೂತ್ರ ವಿಸರ್ಜನೆಗೂ ಜಿಎಸ್ಟಿ ಕಟ್ಟದಿದ್ದರೇ ಅರೆಸ್ಟ್: ವಾಟಾಳ್ ನಾಗರಾಜ್