ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವಿವಾದ ವಿಚಾರವಾಗಿ ಸರ್ಕಾರ ರಚಿಸಿರುವ ಮೇಲ್ವಿಚಾರಣಾ ಸಮಿತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಾತ್ಯಾತೀತ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗದವರ ಆರಾಧ್ಯ ದೈವವಾಗಿರುವ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರ್ಕಾರ ನೇಮಿಸಿರುವ ಸಲಹಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಎಲ್ಲಾ ಸಮುದಾಯಗಳು ಒಕ್ಕೊರಲಿನಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದ್ದರೂ ಮನ್ನಣೆ ನೀಡಿಲ್ಲ. ಹಾಗಾಗಿ, ಸರ್ಕಾರದ ವಿರುದ್ಧ ಜಾತ್ಯಾತೀತವಾಗಿ ಹೋರಾಟಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ ಎಂದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಚಾರವಾಗಿ ರಾಜ್ಯ ಸರ್ಕಾರ ಜಿಲ್ಲಾಡಳಿತದ ಮೂಲಕ ಮೇಲ್ವಿಚಾರಣೆ ಸಮಿತಿ ರಚನೆ ಮಾಡುವ ಮೂಲಕ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ. ಹಾಗಾಗಿ ಈ ಕೂಡಲೇ ಸಮಿತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸಮಿತಿ ರದ್ದುಗೊಳಿಸುವಂತೆ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪನವರು ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆರ್ಯ ಈಡಿಗರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇವೆ. ಆದರೂ, ನಮ್ಮ ಮನವಿಗೆ ಯಾವ ರೀತಿಯಲ್ಲಿಯೂ ಸ್ಪಂದನೆ ದೊರೆತಿಲ್ಲ. ಹಾಗಾಗಿ ಜಾತ್ಯತೀತವಾಗಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದರು.