ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಜನರು ತುಸು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ 5 ದಿನಗಳಿಂದ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 180 ಮನೆಗಳು ಕುಸಿತಗೊಂಡಿವೆ. 19 ರಸ್ತೆಗಳು ಸಂಪೂರ್ಣ ಹಾಳಾಗಿವೆ. 5 ಸೇತುವೆಗಳು ಹಾನಿಗೊಳಗಾಗಿವೆ. 6 ಅಂಗನವಾಡಿ, 9 ಶಾಲೆ, 7 ಕೆರೆ, 21 ಕೊಟ್ಟಿಗೆಗಳಿಗೆ ಹಾನಿಯಾಗಿದೆ. 2,119 ಎಕರೆ ಕೃಷಿ ಭೂಮಿ ಹಾಗೂ 138 ಎಕರೆ ತೋಟಗಾರಿಕಾ ಭೂಮಿ ಹಾನಿಯಾಗಿದೆ.
ಈ ಕುರಿತು ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲೆಯಲ್ಲಿ ಬಿದ್ದ ಮನೆಗಳಿಗೆ ಇಂದಿನಿಂದ ತಕ್ಷಣ 10 ಸಾವಿರ ರೂ ನೀಡಲಾಗುವುದು. ಅಲ್ಲದೇ 1 ಲಕ್ಷ ರೂ ಮನೆ ಮಾಲೀಕರ ಖಾತೆಗೆ ಆನ್ ಲೈನ್ ಮೂಲಕ ಹಾಕಲಾಗುವುದು. ಜಿಲ್ಲೆಯಲ್ಲಿ ಮಳೆಯ ಹಾನಿಯ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು. ಮಳೆಯಿಂದ ಹಾನಿಗೊಳಾದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಸಚಿವರು ಅಭಯ ನೀಡಿದ್ದಾರೆ.