ಶಿವಮೊಗ್ಗ: ಕಿಲ್ಲರ್ ಕೊರೊನಾ ವೈರಸ್ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ತಡವಾಗಿ. ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಶಿವಮೊಗ್ಗದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಆರಂಭದಲ್ಲಿ ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ಬಂದವರಲ್ಲಿ ಕಾಣಿಸಿಕೊಂಡಿದ್ದ ವೈರಸ್ ಬಳಿಕ ಸ್ಥಳೀಯರಲ್ಲೂ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಅದರಲ್ಲೂ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೇ. 30ರಿಂದ 35ಕ್ಕೆ ಏರಿಕೆಯಾಗಿತ್ತು. ಆದ್ರೆ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಗಣನೀಯವಾಗಿ ತಗ್ಗಿದೆ.
ಶಿವಮೊಗ್ಗ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಜಿಲ್ಲೆಯಲ್ಲಿ 3ರಿಂದ 4 ಸಾವಿರ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಪ್ರತಿನಿತ್ಯ 350-400 ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದರು. ಅದ್ರೆ ಇದೀಗ ಆ ಪ್ರಮಾಣ ಜಿಲ್ಲೆಯಲ್ಲಿ ಗಣನೀಯವಾಗಿ ತಗ್ಗಿದ್ದು, ಪಾಸಿಟಿವ್ ರೇಟ್ ಶೇಕಡಾ 2ಕ್ಕೆ ಇಳಿದಿದೆ. ಜೊತೆಗೆ ಶೇ. 5ರಿಂದ 6ರಷ್ಟು ಇದ್ದ ಕೊರೊನಾ ಸೋಂಕಿತರ ಮರಣ ಪ್ರಮಾಣ ಕೂಡ ಇದೀಗ ಶೇ. 1.3ಕ್ಕೆ ಇಳಿದಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದ್ದ ವೇಳೆ ಜಿಲ್ಲೆಯ ಮೆಗ್ಗಾನ್ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಹಾಗೂ ತಾಲೂಕು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಒಂದೇ ಬಾರಿಗೆ 3800ಕ್ಕೂ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿದ್ದವು. ಆದ್ರೀಗ ಅದೇ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ಮಾಡುತ್ತಿದ್ದರೂ ಕೋವಿಡ್ ಕಡಿಮೆಯಾಗಿರುವ ಕಾರಣ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 471ಕ್ಕೆ ಇಳಿದಿದೆ.
ಆರಂಭದಲ್ಲಿ ಕೋವಿಡ್ ಟೆಸ್ಟ್ಗೆ ಹಿಂದೇಟು ಹಾಕುತ್ತಿದ್ದ ಜನ ಸ್ವಯಂಪ್ರೇರಿತವಾಗಿ ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದು, ಸೋಂಕಿನ ಪ್ರಸರಣಕ್ಕೂ ಸಹ ಕಡಿವಾಣ ಬಿದ್ದಂತಾಗಿದೆ. ಕೊರೊನಾ ಸೋಂಕಿತರು ಪ್ರಾರಂಭದಲ್ಲೇ ಪತ್ತೆಯಾಗುತ್ತಿರುವುದರಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸೋಂಕಿನಿಂದ ಶೀಘ್ರವೇ ಮುಕ್ತರಾಗುತ್ತಿದ್ದಾರೆ. ಹೀಗಾಗಿಯೇ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ಗಿಂತ ರಿಕವರಿ ರೇಟ್ ಹೆಚ್ಚಾಗಿದೆ.
ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತ ಆರಂಭದಿಂದಲೂ ಕಠಿಣ ಕ್ರಮ ಕೈಗೊಂಡಿತ್ತು. ಇದರಿಂದಾಗಿಯೇ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೇಟ್ ಶೇ. 40ರಿಂದ ಶೇ. 2ಕ್ಕೆ ಹಾಗೂ ಡೆತ್ ರೇಟ್ ಶೇ. 6ರಿಂದ ಶೇ. 1.3ಕ್ಕೆ ಇಳಿದಿದೆ. ಇದು ಹೀಗೆಯೇ ಮುಂದುವರಿದು ಮಲೆನಾಡು ಶಿವಮೊಗ್ಗ ಜಿಲ್ಲೆ ಶೀಘ್ರವೇ ಕೊರೊನಾ ಮುಕ್ತವಾಗಲಿ ಎಂಬುದೇ ನಮ್ಮ ಆಶಯ.