ಶಿವಮೊಗ್ಗ: ಶಿಕಾರಿಪುರ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಬಂಡಾಯ ಎದುರಾಗಲಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬಂಡಾಯವಾಗಿ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ. ಅದೇ ರೀತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಅವರಿಗೂ ಸಹ ಬಂಡಾಯವಾಗಿ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯ ಹೆಚ್ಚಾಗಿದೆ. ಶಿಕಾರಿಪುರದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ ಗೌಡ ಅವರೂ ಕೂಡಾ ಬಂಡಾಯ ಅಭ್ಯರ್ಥಿಯಾಗಿಯೇ ನಿಲ್ಲುವುದಾಗಿ ಘೋಷಿಸಿದ್ದಾರೆ.
ಕೆ.ಬಿ.ಪ್ರಸನ್ನಕುಮಾರ್ ಅವರ ನಿವಾಸವಿರುವ ಅಶೋಕ ನಗರದಲ್ಲಿ ಅಭಿಮಾನಿಗಳು ರಸ್ತೆಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಹೈಕಮಾಂಡ್ ಬಿ ಫಾರಂ ಅನ್ನು ಪ್ರಸನ್ನ ಕುಮಾರ್‌ಗೆ ನೀಡಬೇಕೆಂದು ಆಗ್ರಹಿಸಿದರು. ಪ್ರಸನ್ನಕುಮಾರ್ ಶಾಸಕರಾಗಿ ಶಿವಮೊಗ್ಗ ನಗರವನ್ನು ಅಭಿವೃದ್ದಿಪಡಿಸಿದ್ದಾರೆ. ಎಲ್ಲ ಸಮಾಜವನ್ನೂ ಸಮಾನವಾಗಿ ನೋಡಿಕೊಂಡಿದ್ದಾರೆ. ಇಂಥವರಿಗೆ ಟಿಕೆಟ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕಾರ್ಯಕರ್ತರು, ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಎಲ್ಲಾ ವಾರ್ಡ್ನ ಮುಖಂಡರು, ಅಭಿಮಾನಿಗಳು ಸೇರಿದಂತೆ ಎಲ್ಲರನ್ನೂ ಸಂಪರ್ಕ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅಭಿಮಾನಿಗಳು ಜಿಲ್ಲಾ ಕಾಂಗ್ರೆಸ್ ಭವನದ ಎದುರು ಟೈಯರ್ ಸುಟ್ಟು ಆಕ್ರೋಶ ಹೊರಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಹ ಬೆಂಬಲವಾಗಿ ಪ್ರತಿಭಟನೆ ನಡೆಸಿದ್ದಾರೆ. ಸುಂದರೇಶ್ ಕಾರು ತಡೆದು ಮಹಿಳಾ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು.
ನಾಗರಾಜ ಗೌಡ ಬಂಡಾಯ, ಜೋಳಿಗೆ ಹಿಡಿದು ಮತಯಾಚನೆ: ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರ ಮುಂದೆ ಸ್ಪರ್ಧಿಸಲು ಶಿಕಾರಿಪುರ ಪುರಸಭ ಸದಸ್ಯ ನಾಗರಾಜ ಗೌಡ ಅವಕಾಶ ಕೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮಾಲತೇಶ್ ಗೋಣಿ ಅವರಿಗೆ ಅವಕಾಶ ಕಲ್ಪಿಸಿದ ಕಾರಣ ಇಂದು ತಮ್ಮ ಶಿಕಾರಿಪುರದ ಮನೆಯ ಮುಂದೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒಪ್ಪಿಗೆ ಪಡೆದು ಜೋಳಿಗೆ ಹಿಡಿದು ಮತಯಾಚನೆ ಮಾಡಿ ತಮ್ಮನ್ನು ಗೆಲ್ಲಿಸಬೇಕು. ನನ್ನ ಕೈ ಬಿಡಬಾರದು, ಶಿಕಾರಿಪುರದ ಬಂಡಾಯದ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಬೇಕೆಂದು ವಿನಂತಿಸಿಕೊಂಡರು. ಕಾಂಗ್ರೆಸ್ನವರು ನಮ್ಮ ಚಿಕ್ಕಪ್ಪನನ್ನು ಕರೆತಂದು ಮೂಗಿಗೆ ತುಪ್ಪ ಸವರಿದರು. ಈಗಲೂ ಅದನ್ನೇ ಮಾಡಿದೆ. ಇದರಿಂದ ನನ್ನನ್ನು ಈ ಬಾರಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: 'ಶೆಟ್ಟರ್ ಅವರಂಥ ದೊಡ್ಡ ನಾಯಕರ ಅವಶ್ಯಕತೆ ನಮ್ಮ ಪಕ್ಷಕ್ಕಿಲ್ಲ': ಧರ್ಮಸ್ಥಳದಲ್ಲಿ ಹೆಚ್ಡಿಕೆ