ಶಿವಮೊಗ್ಗ: ಅಪರೂಪಕ್ಕೆ ಕಾಣುವ, ಅಸ್ವಸ್ಥಗೊಂಡು ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದ ಚಿರತೆ ಬೆಕ್ಕು (ಕಾಡು ಬೆಕ್ಕು) ಅನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿರುವ ಘಟನೆ ಹೊಸನಗರದ ಪುರಪ್ಪೆಮನೆ ಗ್ರಾಮದ ಬಳಿ ನಡೆದಿದೆ. ಪುರಪ್ಪೆಮನೆ - ಗಡಿಕಟ್ಟೆ ಗ್ರಾಮದ ನಡುವಿನ ರಸ್ತೆ ಪಕ್ಕದ ಚರಂಡಿಯಲ್ಲಿ ಚಿರತೆ ಬೆಕ್ಕು ಅಸ್ವಸ್ಥವಾಗಿ ಬಿದ್ದಿದೆ ಎಂದು ಹೊಸನಗರದ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತಕ್ಷಣ ಹೊಸನಗರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪ್ರಾರಂಭದಲ್ಲಿ ಇದನ್ನು ಚಿರತೆ ಎಂದು ಸ್ಥಳೀಯರು ವಾದ ಮಾಡಿದ್ದರು. ನಂತರ ಅರಣ್ಯಾಧಿಕಾರಿಗಳು ಇದು ಚಿರತೆ ಜಾತಿಯ ಪ್ರಾಣಿ, ಚಿರತೆ ಬೆಕ್ಕು ಎಂದು ಹೇಳಿ ಅದರ ಚಿಕಿತ್ಸೆಗೆಂದು ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮಕ್ಕೆ ರವಾನಿಸಿದ್ದಾರೆ. ಹುಲಿ ಮತ್ತು ಸಿಂಹಧಾಮದ ವೈದ್ಯಾಧಿಕಾರಿಗಳು ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಸದ್ಯ ಚಿರತೆ ಬೆಕ್ಕನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಚಿರತೆ ಬೆಕ್ಕು ಪಶ್ಚಿಮಘಟ್ಟ ದಟ್ಟಾರಣ್ಯದಲ್ಲಿ ಮಾತ್ರ ಕಂಡು ಬರುತ್ತದೆ. ಇದು ಕಾಡಿನಲ್ಲಿ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತದೆ.
ಇದನ್ನೂ ಓದಿ : ಪುತ್ತೂರು: ಮನೆಯಲ್ಲಿ ಅಪರೂಪದ 'ಫಾರ್ಸ್ಟೆನ್ ಕ್ಯಾಟ್ ಸ್ನೇಕ್' ಪತ್ತೆ
ಮಲಬದ್ದತೆ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಹೆಬ್ಬಾವಿಗೆ ಚಿಕಿತ್ಸೆ ನೀಡಿ ರಕ್ಷಣೆ (ಮಂಗಳೂರು): ಇತ್ತೀಚೆಗೆ ಮಂಗಳೂರಿನ ಕದ್ರಿಯಲ್ಲಿ ಮಲಬದ್ದತೆಯ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಹೆಬ್ಬಾವನ್ನು ಮಂಗಳೂರಿನ ವೈದ್ಯರ ತಂಡ ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಗಿತ್ತು. ಮಂಗಳೂರಿನ ವೈದ್ಯಾಧಿಕಾರಿಗಳಾದ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ವೈದ್ಯರ ತಂಡ ಈ ಹೆಬ್ಬಾವಿನ ಶಸ್ತ್ರ ಚಿಕಿತ್ಸೆ ನಡೆಸಿ ರಕ್ಷಣೆ ಮಾಡಿದ್ದರು
ಈಟಿವಿ ಭಾರತ ಜೊತೆಗೆ ಮಾತನಾಡಿದ ಚಿಕಿತ್ಸೆ ನೀಡಿದ ತಂಡದ ವೈದ್ಯ ಡಾ.ಯಶಸ್ವಿ ನಾರಾವಿ, ’’ಉರಗ ರಕ್ಷಕ ಧೀರಜ್ ಗಾಣಿಗ ಅವರಿಗೆ ಕದ್ರಿಯಲ್ಲಿ ಅಸ್ವಸ್ಥ ಹೆಬ್ಬಾವು ಕಾಣಸಿಕ್ಕಿದೆ. ಅವರು ನನಗೆ ಕರೆ ಮಾಡಿ ಹೆಬ್ಬಾವಿಗೆ ಯಾರೋ ಹೊಡೆದಿರಬೇಕು ಎಂದರು. ಅದಕ್ಕೆ ಚಿಕಿತ್ಸೆ ನೀಡಲು ಕ್ಲಿನಿಕ್‌ಗೆ ಕರೆ ತರಲು ತಿಳಿಸಿದ್ದೆ. ಅದನ್ನು ಪರಿಶೀಲಿಸಿದಾಗ ಅದಕ್ಕೆ ಯಾರೂ ಹೊಡೆದಿರಲಿಲ್ಲ. ಅದಕ್ಕೆ ಮಲಬದ್ದತೆ ಸಮಸ್ಯೆ ಇತ್ತು ಎಂಬುದು ತಿಳಿದುಬಂದಿತ್ತು. ಹೀಗಾಗಿ ತಪಾಸಣೆ ನಡೆಸಿದಾಗ ಹಾವು ಮಲಬದ್ಧತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇದು ಸಾಕಷ್ಟು ಗಟ್ಟಿಯಾದ ಮಲಬದ್ಧತೆಯ ದ್ರವ್ಯರಾಶಿಯನ್ನು ಹೊಂದಿತ್ತು. ಹೆಬ್ಬಾವಿನ ದೇಹದ ಅರ್ಧ ಭಾಗದಷ್ಟು ಮಲ ತುಂಬಿಕೊಂಡಿತ್ತು. 13 ಕೆಜಿ ತೂಕದ ಹೆಬ್ಬಾವಿಗೆ ಅಲ್ಟ್ರಾಸೌಂಡ್ ಮಾಡುವ ಮೊದಲು ಅರವಳಿಕೆ ನೀಡಲಾಯಿತು. ನಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಬದುಕಿಸಲಾಗದೆ ಎಂದು ತಿಳಿಸಿದ್ದರು.