ಶಿವಮೊಗ್ಗ: ಆರಂಭಿಕ ಬ್ಯಾಟ್ಸ್ಮನ್ ಆರ್.ಸಮರ್ಥ್ ಶತಕ ಹಾಗೂ ಕೆ.ಗೌತಮ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಮಧ್ಯ ಪ್ರದೇಶದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
ಶಿವಮೊಗ್ಗ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ದಿನ 3 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ 233 ರನ್ಗಳಿಸಿತ್ತು. ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಸಿದ್ಧಾರ್ಥ್(62) ನಿನ್ನೆಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು 105 ರನ್ಗಳಿಸಿದ್ದ ಸಮರ್ಥ್ ಇಂದು ಆ ಮೊತ್ತಕ್ಕೆ 3 ರನ್‌ಗಳಿಸಿ ಔಟಾದರು. ನಂತರ ಬಂದ ವಿಕೆಟ್ ಕೀಪರ್ ಶರತ್ 15 ರನ್ಗಳಿಗೆ ಸೀಮಿತರಾದರು.
ಕರ್ನಾಟಕ ತಂಡ 282 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಂದಾದ ಶ್ರೇಯಸ್ ಗೋಪಾಲ್(50) ಹಾಗೂ ಕೆ ಗೌತಮ್(82) 7ನೇ ವಿಕೆಟ್ಗೆ 120 ರನ್ಗಳ ಜೊತಯಾಟ ನೀಡಿ ತಂಡದ ಮೊತ್ತವನ್ನು 400 ರನ್ಗಳ ಗಡಿದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೆ.ಗೌತಮ್ 4 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಸೇರಿದಂತೆ 82 ರನ್ಗಳಿಸಿದರೆ, ಗೋಪಾಲ್ 87 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್ಗಳಿಸಿದರು.
ಒಟ್ಟಾರೆ ಕರ್ನಾಟಕ ತಂಡ 132 ಓವರ್‌ಗಳಲ್ಲಿ 426 ರನ್ಗಳಿಗೆ ಆಲೌಟ್ ಆಯಿತು. ಮಧ್ಯಪ್ರದೇಶ ಪರ ಗೌರವ್ ಯಾದವ್ 2, ರವಿ ಯಾದವ್ 3, ಕುಲ್ದೀಪ್ ಸೇನ್ 2, ಕುಮಾರ್ ಕಾರ್ತಿಕೇಯ 3 ವಿಕೆಟ್ ಪಡೆದರು.
ಕರ್ನಾಟಕ ನೀಡಿದ 426 ಗಳ ಗುರಿಹೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶ ಆರಂಭದಲ್ಲಿ ರಜತ್ ಪಾಟಿದರ್(0) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭಿಸಿತು. ಬಳಿಕ ರಮೀಜ್ ಖಾನ್ 22 ರನ್‌ಗಳಿಸಿ ಪೆವಿಲಿಯನ್ ಸೇರಿಸಿದರು. ಎರಡನೇ ದಿನಾಟದ ಅಂತ್ಯಕ್ಕೆ 34 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 60ರನ್ ಗಳಿಸಿದೆ. ಕರ್ನಾಟಕದ ಪರ ಎ.ಮಿಥುನ್ ಮತ್ತು ಪ್ರತೀಕ್ ಜೈನ್ 1 ವಿಕೆಟ್ ಪಡೆದಿಕೊಂಡಿದ್ದಾರೆ.