ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಯುವರತ್ನ' ಇಂದು ಬಿಡುಗಡೆಯಾಗಿದೆ.
ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಅಭಿಮಾನಿಗಳು 7 ಗಂಟೆಯ ಪ್ರದರ್ಶನಕ್ಕೆ ಬೆಳಗ್ಗೆ 5 ಗಂಟೆಗೆ ಬಂದು ಚಿತ್ರಮಂದಿರವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಅಲ್ಲದೇ ಚಿತ್ರ 100 ದಿನ ಪೂರೈಸಲಿ ಎಂದು ಹಾರೈಸಿ, ಅಪ್ಪು ಕಟೌಟ್ಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು.
ತಮ್ಮ ನೆಚ್ಚಿನ ನಟನ ಚಿತ್ರ ನೋಡಲು ಅಭಿಮಾನಿಗಳು ಚಿತ್ರಮಂದಿರಕ್ಕೆ ನೂಕು ನುಗ್ಗಲಿನಲ್ಲಿ ತೆರಳಿದರು. ಚಿತ್ರ ಪ್ರಾರಂಭವಾಗಿ 5 ನಿಮಿಷದ ನಂತರ ಅಪ್ಪು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಈ ವೇಳೆ, ಅಭಿಮಾನಿಗಳು ಅಪ್ಪುಗೆ ಜಯಕಾರ ಹಾಕುತ್ತಾ, ಹೂವಿನ ಸುರಮಳೆಯನ್ನೇ ಮಾಡಿದರು. ಬಳಿಕ ಬ್ಲಾಸ್ಟರ್ ಸಿಡಿಸಿ ಚಿತ್ರಮಂದಿರದ ಒಳಗೆ ಡ್ಯಾನ್ಸ್ ಮಾಡಿ ಖುಷಿ ಪಟ್ಟರು.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ರಾಜಕುಮಾರ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ. ತಮನ್ನ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರೈ, ದಿಗಂತ್, ಡಾಲಿ ಧನಂಜಯ್ ನಟಿಸಿದ್ದಾರೆ.