ಶಿವಮೊಗ್ಗ: ಶಿವಮೊಗ್ಗ ವಾರ್ಡ್ ನಂ.3 ಮತ್ತು 4 ರ ನಡುವೆ ಇರುವ ಶಾಂತಿನಗರ ಮುಖ್ಯ ರಸ್ತೆಯನ್ನು ದುರಸ್ಥಿ ಮಾಡಬೇಕೆಂದು ಆಗ್ರಹಿಸಿ, ಪಾಲಿಕೆ ಸದಸ್ಯ ಯೋಗೀಶ್ ಹಸುವಿಗೆ ಸ್ನಾನ ಮಾಡಿಸಿ, ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಪೋರೇಟರ್ ಯೋಗೀಶ್ ಇಂದು ಶಾಂತನಗರ ಮುಖ್ಯ ರಸ್ತೆಯನ್ನು ರಿಪೇರಿ ಮಾಡಿಸಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲು ಆಗದ ಪರಿಸ್ಥಿತಿ ಬಂದಿದೆ. ದ್ವಿಚಕ್ರ ವಾಹನ ಸವಾರರು ಬೀಳುವಂತಹ ಸ್ಥಿತಿ ಬಂದಿದೆ. ರಸ್ತೆ ಕೆಸರು ಗದ್ದೆಯಂತಾಗಿದೆ. ಒಂದು ರೀತಿ ದನದ ಕೊಟ್ಟಿಗೆಯಂತೆ ಆಗಿದೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ರಸ್ತೆಯಲ್ಲಿಯೇ ಹಸುವಿಗೆ ಸ್ನಾನ ಮಾಡಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದೆ, ಶಿವಮೊಗ್ಗದ ಆಯ್ದ ಬಡಾವಣೆಯನ್ನು ಮಾತ್ರ ಅಭಿವೃದ್ದಿ ಮಾಡುವುದು ಸರಿಯಲ್ಲ. ನಗರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಬೇಕು ಎಂದು ಆಗ್ರಹಿಸಲಾಯಿತು. ತಕ್ಷಣವೇ ಶಾಂತಿನಗರ ಮುಖ್ಯ ರಸ್ತೆಯನ್ನು ಅಭಿವೃದ್ದಿ ಪಡಿಸಬೇಕು ಎಂದು ರಸ್ತೆ ತಡೆ ನಡೆಸಲಾಯಿತು.
ಬಳಿಕ ಸ್ಥಳಕ್ಕೆ ಪಾಲಿಕೆಯ ಆಯುಕ್ತ ಚಿದಾನಂದ ವಾಠರೆಯವರು ಬಂದು ರಸ್ತೆ ದುರಸ್ಥಿಯನ್ನು ಆದಷ್ಟು ಬೇಗ ಮಾಡಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ರವರಿಗೆ ಸ್ಥಳೀಯ ನಿವಾಸಿಗಳು ಸಾಥ್ ನೀಡಿದ್ದರು.