ಶಿವಮೊಗ್ಗ: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಜನವರಿ 10ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಹೋರಾಟ ನಡೆಸಲಾಗುತ್ತದೆ. 'ಮಾಡು ಇಲ್ಲವೇ ಮಡಿ’ ಎಂಬ ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ್ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 2006ರ ಎಪ್ರಿಲ್ಗೂ ಮುನ್ನ ಅನುದಾನ ನೀಡಿರುವ ಮತ್ತು ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಯಾವೊಬ್ಬ ನಿವೃತ್ತ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿಯಾಗಲಿ(ಓಪಿಎಸ್) ಅಥವಾ ವಂತಿಕೆ ಆಧಾರದ ನೂತನ ಪಿಂಚಣಿ(ಎನ್‌ಪಿಎಸ್) ಸೌಲಭ್ಯ ಇಲ್ಲದಿರುವುದನ್ನು ಖಂಡಿಸಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಓಪಿಎಸ್ ಅಥವಾ ಎನ್‌ಪಿಎಸ್ ಇವೆರಡರಲ್ಲಿ ಒಂದನ್ನಾದರೂ ಜಾರಿಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ನಾನಾ ರೀತಿಯ ಹೋರಾಟಗಳನ್ನು ಮಾಡಿ ಸರ್ಕಾರದ ಗಮನ ಸೆಳೆದಿದ್ದರೂ ಹುಸಿ ಭರವಸೆ ನೀಡಿ ಸಾವಿರಾರೂ ನೌಕರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಈ ಧೋರಣೆಗೆ ಬೇಸತ್ತು ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದರು.